ಬೀದರ್: ಗ್ರಾಮೀಣ ಭಾಗದಲ್ಲಿ ಬಹುತೇಕ ಗ್ರಾಮಸ್ಥರು ಅವರ ಕೆಲಸ –ಕಾರ್ಯಗಳಿಗಾಗಿ ಗ್ರಾಮ ಪಂಚಾಯತ್ ಕಚೇರಿಗೆ ಹೋಗುವುದು ಸಹಜ. ಪಂಚಾಯತ್ ಕಚೇರಿಗೆ ಹೋದರೆ ಅಲ್ಲಿ ಪಿಡಿಓ ಆಗಲಿ ಕಾರ್ಯದರ್ಶಿ ಆಗಲಿ ಇರುವುದಿಲ್ಲ, ಅವರೆಲ್ಲಿ ಎಂದು ಕೇಳಿದಾಗ ತಾಲೂಕ್ ಪಂಚಾಯತ್ ಅಥವಾ ಜಿಲ್ಲಾ ಪಂಚಾಯತ್ ನಲ್ಲಿ ಸಭೆಗೆ ಹೋಗಿದ್ದಾರೆ ಎನ್ನುವ ಉತ್ತರ ಸಿಗುತ್ತಿದೆ, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಕೌಠಾ (ಬಿ) ಗ್ರಾಮ ಪಂಚಾಯತ್ ಸದಸ್ಯ ಪ್ರದೀಪ ಯನಗುಂದೆ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರವು ಸುಮಾರು ಸುತ್ತೋಲೆಗಳನ್ನು ಹೊರಡಿಸಿ. ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸುವ ಸಭೆಗಳನ್ನು ವರ್ಚುವಲ್ ಮೂಲಕ ಸಭೆಗಳನ್ನು ಆಯೋಜಿಸುವಂತೆ ಸೂಚಿಸಿದೆ. ಇಂಟರ್ನೆಟ್ ಇರದ ಪಂಚಾಯತಿಯ ಪಿಡಿಓ / ಕಾರ್ಯದರ್ಶಿ ಹತ್ತಿರದ ಗ್ರಾಮ ಪಂಚಾಯಿತಿಗೆ ಹೋಗಿ ಸದರಿ ವರ್ಚುವಲ್ ಸಭೆಯಲ್ಲಿ ಭಾಗವಹಿಸಬಹುದೆಂದು ಅವಕಾಶ ಕಲ್ಪಿಸಿರುತ್ತದೆ. ಆದರೆ ಬೀದರ್ ಜಿಲ್ಲೆಯಲ್ಲಿ ಪಿಡಿಓ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ್ ಹಾಗೂ ತಾಲೂಕ ಪಂಚಾಯತಿಯಲ್ಲಿ ಸಭೆ/ ಮೀಟಿಂಗ್ ನೆಪದಲ್ಲಿ ತಿಂಗಳಲ್ಲಿ 8 ರಿಂದ 10 ದಿವಸಗಳ ಕಾಲ ಪಂಚಾಯತಿಯಿಂದ ಗೈರು ಹಾಜರಾಗುತ್ತಿದ್ದಾರೆ, ಇದರಿಂದಾಗಿ ಗ್ರಾಮಸ್ಥರು ಪಂಚಾಯತ್ ಕಛೆರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಅದು ಅಲ್ಲದೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ಅಭಿವೃದ್ಧಿ ಯೋಜನೆಗಳು ಆಮೆಗತಿಯಲ್ಲಿ ಸಾಗುತ್ತಿವೆ, ಇದರಿಂದ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗುವುದಲ್ಲದೇ ಅರ್ಹ ಫಲಾನುಭವಿಗಳೂ ಸಹ ಸರ್ಕಾರಗಳ ಮಹತ್ತರ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪಿಡಿಓ ಹಾಗೂ ಕಾರ್ಯದರ್ಶಿಗಳು ಪಂಚಾಯತ್ ಕಚೇರಿಗೆ ತಡವಾಗಿ ಬಂದು ಬಯೋಮೆಟ್ರಿಕ್ ಹಾಜರಾತಿ ಹಾಕುತ್ತಾರೆ, ವಿಚಾರಿಸಿದರೆ ಜಿಲ್ಲಾ ಪಂಚಾಯತ್ ಅಥವಾ ತಾಲೂಕು ಪಂಚಾಯತ್ ನಲ್ಲಿ ಸಭೆಗೆ ಹಾಜರಾಗಿರುವ ಕಾರಣ ತಡವಾಗಿದೆ ಎಂದು ತಿಳಿಸುತ್ತಾರೆ.
ಆದುದರಿಂದ ಜಿಲ್ಲಾ ಪಂಚಾಯತ್ ಹಾಗೂ ತಾಲೂಕ ಪಂಚಾಯತ್ ಅಧಿಕಾರಿಗಳು ತಮ್ಮ ತಮ್ಮ ಕಚೇರಿಯಲ್ಲಿ ಕರೆಯಲಾದ ಭೌತಿಕ ಸಭೆಗಳ ಕುರಿತು ಒಂದು ತಿಂಗಳ ಮೊದಲು ನೋಟಿಸು ಜಾರಿ ಮಾಡಬೇಕು ಹಾಗೂ ಅಂತಹ ನೋಟಿಸ್ ಗಳನ್ನು ಗ್ರಾಮ ಪಂಚಾಯತಿಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ತಿಳಿಯುವಂತೆ ಪಂಚಾಯತ್ ಕಛೆರಿಯ ನೋಟಿಸ್ ಬೋರ್ಡ್ ಗೆ ಒಂದು ತಿಂಗಳ ಮುಂಚೆಯೇ ಬಿತ್ತರಿಸಬೇಕು. ಸರ್ಕಾರದ ಸುತ್ತೋಲೆಯಲ್ಲಿ ಸೂಚಿಸಿರುವಂತೆ ವರ್ಚುವಲ್ ಸಭೆಗಳನ್ನು ಆಯೋಜಿಸಬೇಕು ಹಾಗೂ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯವಾಗಿ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಅಳವಡಿಸಿ, ಸಂಬಂಧಪಟ್ಟ ಅಧಿಕಾರಿಗಳು ನಿಯಮಿತವಾಗಿ ನಿಗಾವಹಿಸಬೇಕು. ಇದರಿಂದ ಬಡ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ ಅಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿಯೂ ತುಂಬಾ ಸಹಕಾರಿಯಾಗುತ್ತದೆ ಎಂದು ಪ್ರದೀಪ ಯನಗುಂದೆ ಮನವಿ ಮಾಡಿಕೊಂಡಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4