ತುಮಕೂರು: ಸರ್ಕಾರ ಎಷ್ಟೇ ಅನುದಾನ, ಪ್ರೋತ್ಸಾಹ ನೀಡಿದರೂ ಜನಬೆಂಬಲ ಇಲ್ಲದೆ ಯಾವ ಕಲೆಯೂ ಬೆಳೆಯುವುದಿಲ್ಲ. ಜನರೇ ಅವುಗಳ ಶಕ್ತಿ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಡಿ. ವಿ. ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.
ಯಕ್ಷದೀವಿಗೆ ಸಂಸ್ಥೆಯ ದಶಮಾನೋತ್ಸವ ವರ್ಷದ ಉದ್ಘಾಟನೆಯನ್ನು ನಗರದ ಶ್ರೀಕೃಷ್ಣಮಂದಿರದಲ್ಲಿ ನೆರವೇರಿಸಿ ಅವರು ಮಾತನಾಡಿದರು.
ಯಕ್ಷಗಾನ ಕಲೆಗೆ ಸುಸಂಸ್ಕೃತ ಕಲಾವಿದರ ಹಿನ್ನೆಲೆ ಇದೆ. ಅದರ ಪ್ರೇಕ್ಷಕರಲ್ಲೂ ಕಲೆಯ ಕುರಿತು ಅಪಾರ ಶ್ರದ್ಧೆ ಹಾಗೂ ಗೌರವ ಇರುತ್ತದೆ. ಅವರು ಕಾಟಾಚಾರಕ್ಕೋ ಕಾಲಹರಣಕ್ಕೋ ಬರುವವರಲ್ಲ. ಯಕ್ಷಗಾನ ಇಷ್ಟು ಜನಪ್ರಿಯವಾಗಿರುವುದಕ್ಕೆ ಕಲಾವಿದರು ಹಾಗೂ ಪ್ರೇಕ್ಷಕರ ಕೊಡುಗೆ ಹೆಚ್ಚಿನದ್ದಾಗಿದೆ ಎಂದರು.
ಕಳೆದ ಏಳೆಂಟು ಶತಮಾನಗಳಿಂದ ಯಕ್ಷಗಾನ ಕಲೆ ನಿರಂತರವಾಗಿ ಬೆಳೆದು ಬಂದಿದೆ. ವಿದೇಶೀಯರಿಂದಲೂ ಮೆಚ್ಚುಗೆ ಪಡೆದಿದೆ. ಕಲೆಯೊಳಗಿನ ಅಂತಃಶಕ್ತಿ ಅದನ್ನು ಇಷ್ಟು ಎತ್ತರಕ್ಕೆ ಏರುವಂತೆ ಮಾಡಿದೆ ಎಂದರು.
ಕೈಗಾರಿಕೋದ್ಯಮಿ ಹೆಚ್.ಜಿ.ಚಂದ್ರಶೇಖರ್ ಮಾತನಾಡಿ, ಯಕ್ಷಗಾನ ವಾಚಿಕ ಪ್ರಧಾನವಾದ ಕಲೆ. ಯಕ್ಷಗಾನ ಕಲಾವಿದರ ಮಾತಿನ ಮೋಡಿಗೆ ಒಳಗಾಗದವರಿಲ್ಲ. ಅನೇಕ ವಿದ್ವಾಂಸರು ನೂರಾರು ವರ್ಷಗಳಿಂದ ಯಕ್ಷಗಾನದ ಮೂಲಕ ಕನ್ನಡದಲ್ಲಿ ಮೌಖಿಕ ಪರಂಪರೆಯೊಂದನ್ನು ಕಟ್ಟಿಬೆಳೆಸಿದ್ದಾರೆ ಎಂದರು.
ಯಕ್ಷದೀವಿಗೆಯ ವಾರ್ಷಿಕ ಗೌರವವನ್ನು ಸ್ವೀಕರಿಸಿ ಮಾತನಾಡಿದ ಶ್ರೀಕೃಷ್ಣ ಭಟ್ ದೇವಕಾನ, ನೇಪಥ್ಯ ಕಲಾವಿದರು ಯಕ್ಷಗಾನದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಕಾಲವಿತ್ತು. ಆದರೆ ಇತ್ತೀಚೆಗೆ ಅವರಿಗೂ ಗೌರವ ಪುರಸ್ಕಾರಗಳು ದೊರೆಯುತ್ತಿವೆ. ಕಲಾವಿದರು ರಂಗದ ಮೇಲೆ ತಮ್ಮ ಪ್ರೌಢಿಮೆಯನ್ನು ಮೆರೆಯುವ ಹಿಂದೆ ನೇಪಥ್ಯ ಕಲಾವಿದರ ಕೊಡುಗೆ ಹೆಚ್ಚಿನದ್ದಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಯಕ್ಷದೀವಿಗೆ ಅಧ್ಯಕ್ಷೆ ಆರತಿ ಪಟ್ರಮೆ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ಸಮೂಹದಲ್ಲಿ ಸಾಮಾಜಿಕ ಹಾಗೂ ನೈತಿಕ ಮೌಲ್ಯಗಳನ್ನು ಬಿತ್ತುವ ಪ್ರಯತ್ನವನ್ನು ಯಕ್ಷಗಾನದ ಮೂಲಕ ಮಾಡುವ ಯೋಜನೆಯಿದೆ ಎಂದರು.
ಶ್ರೀಕೃಷ್ಣಮಂದಿರ ಅಧ್ಯಕ್ಷ ಶ್ರೀನಿವಾಸ ಹತ್ವಾರ್, ಮಾರುತಿ ವಿದ್ಯಾಕೇಂದ್ರದ ನಿರ್ದೇಶಕಿ ಉಮಾಪ್ರಸಾದ್ ಉಪಸ್ಥಿತರಿದ್ದರು. ‘ಕರ್ಣಭೇದನ’ ಯಕ್ಷಗಾನ ತಾಳಮದ್ದಳೆ ಹಾಗೂ ‘ಮಹಿಷಮರ್ದಿನಿ’ ಬಯಲಾಟ ಪ್ರದರ್ಶನ ನಡೆಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx