ಪಿಯು ಪರೀಕ್ಷೆಯ ಪ್ರತಿ ವಿಷಯದ ಪ್ರಶ್ನೆ ಪತ್ರಿಕೆಯಲ್ಲೂ 15ರಿಂದ 20 ಅಂಕಗಳ ಬಹು ಆಯ್ಕೆ ಪ್ರಶ್ನೆಗಳನ್ನು ಅಳವಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಪ್ರಸ್ತುತ ಪಿಯು ಪ್ರಶ್ನೆ ಪತ್ರಿಕೆ ವಿವರಣಾತ್ಮಕ ಉತ್ತರಗಳನ್ನು ಮಾತ್ರ ಒಳಗೊಂಡಿದೆ. ಒಂದು ಅಂಕದ ಪ್ರಶ್ನೆ ಗಳಿಗೂ ವಿವರಣಾತ್ಮಕ ಉತ್ತರಗಳನ್ನು ವಿದ್ಯಾರ್ಥಿಗಳು ಬರೆಯಬೇಕಿದೆ. ಹಾಗಾಗಿ ಹೆಚ್ಚಿನ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಪಿಯು ಪರೀಕ್ಷಾ ಪದ್ಧತಿಯಲ್ಲಿ ಬಲಾವಣೆ ತರಲು ಮುಂದಾಗಿದೆ.
ಸಚಿವ ಬಿ.ಸಿ.ನಾಗೇಶ್ ಅಧ್ಯಕ್ಷತೆಯಲ್ಲಿ ನಡೆದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ.ರಾಜ್ಯದ ದ್ವಿತೀಯ ಪಿಯು ಫಲಿತಾಂಶವನ್ನು ಕೇಂದ್ರೀಯ ಮಂಡಳಿಗಳ ಫಲಿತಾಂಶಗಳೊಂದಿಗೆ ಹೋಲಿಸಿದಾಗ ರಾಜ್ಯದ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಮತ್ತು ಅಂಕಗಳ ಸಾಮರ್ಥ್ಯ ಕಡಿಮೆಯಾಗುತ್ತಿದೆ.
ವೃತ್ತಿ ಪರ ಕೋರ್ಸ್‌ಗಳ ಸೀಟುಗಳಿಗಾಗಿ ಸಿಬಿಎಸ್‌ಇ ವಿದ್ಯಾರ್ಥಿಗಳ ಜತೆ ಸ್ಪರ್ಧಿಸುವ ಸವಾಲನ್ನು ಎದುರಿಸುತ್ತಿದ್ದಾರೆ. ಉತ್ತೀರ್ಣತೆಯ ಶೇಕಡಾವಾರು ಪ್ರಮಾಣ ಸುಧಾರಿಸಲು ಪ್ರಥಮ ಹಾಗೂ ದ್ವಿತೀಯ ಪಿಯು ಪರೀಕ್ಷೆಗಳಲ್ಲಿ ಈ ಪದ್ಧತಿ ಅಳವಡಿಸಿಕೊಳ್ಳಬಹುದು ಎಂದು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಬಹುಆಯ್ಕೆಯ ಪ್ರಶ್ನೆಗಳ ಅಳವಡಿಕೆಯಿಂದ ಪಿಯು ಫಲಿತಾಂಶ ದಲ್ಲಿ ಹೆಚ್ಚಳವಾದರೆ ಪದವಿ ಪ್ರವೇಶಕ್ಕೆ ಅನುಕೂಲವಾಗುತ್ತದೆ ಎಂಬ ನಿರೀಕ್ಷೆ ಯೂ ಈ ಆಲೋಚನೆಯ ಹಿಂದಿದೆ. ಬಹು ಆಯ್ಕೆ ಪ್ರಶ್ನೆಗಳ ಅಳವಡಿಕೆಯ ಪ್ರಸ್ತಾವಕ್ಕೆ ಸಚಿವರು ಒಲವು ತೋರಿದ್ದು, ಚರ್ಚೆಯ ನಂತರವಷ್ಟೇ ಅಂತಿಮ ನಿರ್ಧಾರ ಸಾಧ್ಯ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


