ಚಿತ್ರದುರ್ಗ: ಪುಂಡರ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಶೀರನಕಟ್ಟೆ ಗ್ರಾಮದಲ್ಲಿ ನಡೆದಿದೆ.
ರಾಧಿಕಾ(17) ನೇಣಿಗೆ ಶರಣಾದ ಬಾಲಕಿ ಎಂದು ಗುರುತಿಸಲಾಗಿದೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಶೀರನಕಟ್ಟೆಯ ಮುದ್ದಪ್ಪ, ಸುದೀಪ್, ಕೋಟಿ, ಅಭಿ ಎಂಬವರು ರಾಧಿಕಾ ಕಾಲೇಜಿಗೆ ಹೋಗುವಾಗ, ಬರುವಾಗ ಜಡೆ ಹಿಡಿದು ಎಳೆದು ಅಶ್ಲೀಲವಾಗಿ ಮಾತನಾಡಿ ಕಿರುಕುಳ ನೀಡುತ್ತಿದ್ದರೆನ್ನಲಾಗಿದ್ದು, ಇದರಿಂದ ನೊಂದಿರುವುದಾಗಿ ಬಾಲಕಿ ಪೋಷಕರ ಬಳಿ ಹೇಳಿಕೊಂಡಿದ್ದಳು ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ಆರೋಪಿಗಳ ವಿರುದ್ಧ ರಾಧಿಕಾ ಪೋಷಕರು ಹೊಸದುರ್ಗ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.