ಈ ಪ್ರಶ್ನೆಯೂ ನನ್ನದೇ, ಉತ್ತರ ಹುಡುಕುವ ಪ್ರಯತ್ನವೂ ನನ್ನದೇ; ನಮ್ಮ ಭೂಮಿ ಎನ್ನುವುದು ಅಸಂಖ್ಯಾತ ಜೀವಿಗಳು ವಾಸ ಮಾಡುತ್ತಿರುವ ಒಂದು ತಾಣ. ಇಲ್ಲಿ ಮನುಷ್ಯನಾಗಿರಲಿ ಅಥವಾ ಯಾವುದೇ ಜೀವಿಯಾಗಿರಲಿ, ಸಹಜವಾಗಿ ಗುಣ ಅಥವಾ ಸ್ವಭಾವ ಎನ್ನುವುದು ಸಮಯ, ಪರಿಸ್ಥಿತಿ ಅಥವಾ ಸಂದರ್ಭಗಳು ಆ ಜೀವಿಗೆ ಕಲಿಸುವ ಪಾಠವಾಗಿರಬಹುದು. ಉದಾಹರಣೆಗೆ ಹಸಿವು ಎಂಬುದು ಯಾವ ಜೀವಿಗೆ ತಾನೆ ಇರುವುದಿಲ್ಲ, ಒಂದು ಮಾಂಸಾಹಾರಿ ಜೀವಿ ಅದಕ್ಕೆ ಹೊಟ್ಟೆ ಹಸಿವಾದಾಗ ಮತ್ತೊಂದು ಸಸ್ಯಾಹಾರಿ ಜೀವಿಯನ್ನು ಮುಲಾಜಿಲ್ಲದೆ ಬೇಟೆಯಾಡಿ ತಿನ್ನುತ್ತದೆ. ಅದಕ್ಕೆ ತನ್ನ ಹಸಿಯುತ್ತಿರುವ ಹೊಟ್ಟೆಯನ್ನು ತುಂಬಿಸುವ ಅಗತ್ಯವಿದೆಯೇ ಹೊರತು, ತಾನು ಬೇಟೆಯಾಡಲಿರುವ ಜೀವಿಯೂ ಕೂಡ ನನ್ನ ಹಾಗೆ ಒಂದು ಜೀವಿ ಅದಕ್ಕೂ ಬದುಕುವ ಹಕ್ಕಿದೆ ಎಂದು ಯೋಚಿಸುವುದೇ ಇಲ್ಲ ಅಥವಾ ಯೋಚಿಸುವಷ್ಟು ಅದರ ಮೆದುಳು ವಿಕಸನ ಹೊಂದಿಲ್ಲ. ಈ ಹೇಳಿಕೆ ಮಾಂಸಾಹಾರ ಜೀವಿಯ ಗುಣ ಅಥವಾ ಸ್ವಭಾವ ಸೂಚಿಸುವುದಿಲ್ಲ, ಬದಲಿಗೆ ಅದರ ಹೊಟ್ಟೆ ಹಸಿಯುವ ಸಮಯದಲ್ಲಿ, ತನ್ನ ಹೊಟ್ಟೆ ತುಂಬಿಸುವ ಸಲುವಾಗಿ ಅಂದರೆ, ತಾನು ಇರುವ ಹಸಿವಿನ ಪರಿಸ್ಥಿತಿ, ಸಸ್ಯಾಹಾರಿ ಜೀವಿ ಬರುವ ಸಂದರ್ಭಕ್ಕಾಗಿ ಹೊಂಚು ಹಾಕುತ್ತಾ ಮರೆಯಲ್ಲಿ ಕಾಯುತ್ತಿತ್ತು ಮತ್ತು ಕೊನೆಗೆ ಬೇಟೆಯಾಡಿ ತಿಂದು ತನ್ನ ಹೊಟ್ಟೆ ತುಂಬಿಸಿಕೊಂಡಿತು ಅಷ್ಟೇ. ಈ ವಿಷಯದಲ್ಲಿ ಪಕ್ಷಿಗಳ ವಿಷಯದಲ್ಲಿಯೂ ಪ್ರತ್ಯೇಕತೆ ಏನಿಲ್ಲ. ಒಂದು ಹದ್ದು ಮತ್ತೊಂದು ಆಮೆ ಅಥವಾ ಇಲಿಯನ್ನು ಹೊತ್ತೊಯ್ದಂತೆ. ಇಲ್ಲಿ ಕೇವಲ ಹಸಿವು ಎಂಬುದು ಒಂದು ಕಾರಣ, ಹಸಿವು ಇಲ್ಲಿ ಒಂದು ಉದಾಹರಣೆ ಆದರೆ ಈ “ಕಾರಣ” ಎಂಬುದು ಬಹು ದೊಡ್ಡದಾದ, ವಶಾಲವಾಗಿ, ಎಲ್ಲ ಕಡೆ ವ್ಯಾಪಿಸಿರುವ ಒಂದು ಪರಿಸ್ಥಿತಿ. ಈ ಪರಿಸ್ಥಿತಿಯು ಎಂತಹ ಜೀವಿಯನ್ನೂ ಕೇಳುವ ಅಥವಾ ಕಿತ್ತುಕೊಳ್ಳುವ ಗುಣ ಕಲಿಸುತ್ತದೆ.
ಇಲ್ಲಿ ಪ್ರಾಣಿ ಪ್ರಪಂಚದ ಗುಣ ಸ್ವಭಾವದ ವಿವರಣೆಯಿಂದ ಸ್ವಲ್ಪ ದೂರ ಇದ್ದು ಕೇವಲ ಮಾನವರಿಗೆ ಸಂಬಂಧಿಸಿದ ವಿವರಣೆ ಕೆಲ ಉದಾಹರಣೆ ಮೂಲಕ ತಿಳಿಸ ಬಯಸುತ್ತೇನೆ. ಅದು ಹೇಗೆಂದರೆ ಆದಿ ಕಾಲದ ಮಾನವರು ಗುಂಪು ಗುಂಪಾಗಿ ಜೀವಿಸುತ್ತಿದ್ದಂತಹ ಕಾಲದಲ್ಲಿ, ಬೇಟೆಯಾಡುವ ಒಂದು ಗುಂಪು ಅಡವಿಗೆ ಹೋಗಿ ಬೇಟೆಯಾಡಿ ತರುತಿದ್ದ ಜೀವಿಯ ದೇಹವನ್ನು, ತಮ್ಮ ವಾಸ ಸ್ಥಾನದಲ್ಲಿ ಇರುತ್ತಿದ್ದ ತಮ್ಮ ಕುಟುಂಬದವರೊಂದಿಗೆ ಸೇರಿಕೊಂಡು ತಿನ್ನುತ್ತಿದ್ದರು, ಮತ್ತೆ ಕೆಲವು ಗುಂಪಿಗೆ ಬೇಟೆಯೇ ಸಿಗದೆ ಅಡವಿಯಿಂದ ಹಿಂತಿರುಗಿರುವ ಪ್ರಸಂಗಗಳೂ ಉಂಟಾಗಿರುವ ಸಾಧ್ಯತೆ ಇರುತ್ತದೆ ಅಥವಾ ತಮ್ಮ ಗುಂಪಿಗೆ ಸಾಕಾಗುವಷ್ಟು ಬೇಟೆ ಸಿಗದಿರಬಹುದು. ಇಂತಹ ಸಮಯಗಳಲ್ಲಿ ತಮ್ಮ ಪಕ್ಕದ ಗುಂಪಿಗೆ ಸ್ವಲ್ಪ ಆಹಾರಕ್ಕಾಗಿ (ಭಾಷೆಯೇ ಇರದ ಕಾಲದಲ್ಲಿ ಕೇವಲ ಸಂಕೇತಗಳ ಮೂಲಕ ಅಂದುಕೊಳ್ಳಬಹುದು) ಮೊರೆ ಇಟ್ಟಿರುವ ಸಾಧ್ಯತೆ ಇರುತ್ತದೆ. ಇಲ್ಲಿ ಬೇಟೆಯಾಡಿ ತಂದಿದ್ದ ಗುಂಪು, ಮೊರೆ ಇಟ್ಟ ಗುಂಪಿಗೆ ಆಹಾರ ಕೊಡದೆ ನಿರಾಕರಿಸಿದಂತಹ ಸಂದರ್ಭಗಳಲ್ಲಿ, ಆಹಾರಕ್ಕಾಗಿ ಬಲವಂತದಿಂದ ಕಿತ್ತುಕೊಳ್ಳುವ ಸಂದರ್ಭ ಉಂಟಾಗಿರಬಹುದು. ಇಲ್ಲಿ ದ್ವೇಷದ ಗುಣ ಆರಂಭವಾದ ಹಾಗೆ ಆಯಿತು. ಇದು ಒಂದು ಬಗೆಯಾದರೆ, ಮತ್ತೊಂದು ಪ್ರಸಂಗಗಳಲ್ಲಿ ಆಹಾರಕ್ಕಾಗಿ ಮೊರೆ ಇಟ್ಟ ಗುಂಪಿಗೆ ಆಹಾರ ನೀಡಿದ ಗುಂಪು ನಂತರ ಅದರ ಪ್ರೀತಿಗೆ ಪಾತ್ರವಾದಂತೆ ಆಗುತ್ತದೆ. ಇಲ್ಲಿ ಸ್ನೇಹದ ಗುಣ ಆರಂಭವಾದಂತೆ ಆಯಿತು. ಹೀಗೆಯೆ ಪ್ರಾಚೀನ ಮಾನವನಿಗೆ ಬೇರೆ ಬೇರೆ ಸಂದರ್ಭಗಳಲ್ಲಿ ಒಳ್ಳೆಯ ಮತ್ತು ಕೆಟ್ಟ ಗುಣಗಳನ್ನು ಸಮಯ, ಸಂದರ್ಭ ಮತ್ತು ಪರಿಸ್ಥಿತಿಗಳು ಕಲಿಸಿರುವ ಸಾಧ್ಯತೆ ಇರುತ್ತದೆ.
ಇದು ಒಂದು ಬಗೆಯಾದರೆ, ಕಾಲಕ್ರಮೇಣ ಒಂದು ಜಾಗದಲ್ಲಿ ಜನಸಾಂದ್ರತೆ ಹೆಚ್ಚಾದಂತೆ, ತನಗೆ ಜೀವಿಸಲು ಬೇಕಾಗುವ ಅನುಕೂಲಗಳ ಕೊರತೆ ಉಂಟಾದಾಗ, ಮತ್ತೊಂದು ಮುಂದುವರೆದ ಪ್ರದೇಶವನ್ನು ಆಕ್ರಮಿಸಿರುವ ಪ್ರಸಂಗಗಳೂ ಉಂಟಾಗಿರಬೇಕು. ಇಂತಹ ಆಕ್ರಮಣಕಾರಿ ನೀತಿ ಪ್ರಾಚೀನ ಕಾಲದಿಂದ ಹಿಡಿದು ಕಾಲಾಂತರ ಘಟ್ಟಗಳ ವರೆಗೆ ಸಾಗುತ್ತಾ ಬಂದು, ಇಂದು ಮುಂದುವರೆದ ಜಗತ್ತಿನಲ್ಲಿಯೂ, ಆಧುನಿಕ ಯುದ್ಧ ನಡೆಯುತ್ತಿರುವುದನ್ನು ಇಂದು ನಾವು ನೋಡುತ್ತಿದ್ದೇವೆ. ಇಲ್ಲಿಯೂ ಕೂಡ ಎಲ್ಲವೂ ಒಂದು “ಕಾರಣ”ಕ್ಕಾಗಿ ಮಾತ್ರ ಅಷ್ಟೇ. ಇಲ್ಲಿ “ಕಾರಣ” ಎಂಬುದು ಮತ್ತೊಂದು ದೇಶದ ಸಂಪತ್ತಿನ ಮೇಲೆ ವ್ಯಾಮೋಹ, ದೇಶ ವಿಸ್ತರಣೆ ದಾಹ, ಎಲ್ಲರೂ ಎಲ್ಲರಿಗಿಂತ ಪ್ರಬಲರಾಗಿರಬೇಕು ಎಂಬ ಎಲ್ಲರ ಪ್ರಯತ್ನ. ಇಂತಹ ಪ್ರಯತ್ನಗಳಲ್ಲಿ ಕೆಲವರು, ಕೆಲವರನ್ನು ಎದುರಿಸಲು ಕೆಲವರೊಂದಿಗೆ ಸ್ನೇಹ ಸಂಪಾದಿಸಿದರೆ, ಮತ್ತೆ ಕೆಲವರು ತಮ್ಮನ್ನು ಎದುರಿಸುವವರು ಯಾರೂ ಇಲ್ಲವೆಂಬ ಅಪಾರ ನಂಬಿಕೆಯಿಂದ ನೇರವಾಗಿಯೇ ದ್ವೇಷಿಸುವ ಗುಣ ಹೊಂದುತ್ತಾರೆ ಮತ್ತು ಮುಲಾಜಿಲ್ಲದೇ ಆಕ್ರಮಣ ನಡೆಸುತ್ತಾರೆ. ಇವರೆಲ್ಲರ ನಂಬಿಕೆ ಒಂದೇ ಅದು “ನಾನೇ ಸರಿ, ಮಿಕ್ಕೆಲ್ಲವೂ ನನ್ನ ಪ್ರಕಾರ ತಪ್ಪು” ಈ ಮನೋಭಾವನೆ ನಾವು ವಿಶ್ವ ಯುದ್ಧಗಳಲ್ಲಿ ನೋಡಿದ್ದೇವೆ. ಇಲ್ಲಿ ಯಾರೇ ಸೋತರೂ ಯಾರೇ ಗೆದ್ದರೂ ಹೊಂದಾಣಿಕೆ ಗುಣ ಇಲ್ಲಿ ಯಾರಿಗೂ ಬರಲೇ ಇಲ್ಲ. ಒಂದು ವೇಳೆ ಬಂದರೂ ಅದು ತಾತ್ಕಾಲಿಕ. ಇಲ್ಲಿ ಬಹುಮುಖ್ಯವಾಗಿ ಗಮನಿಸಬೇಕಾಗಿರುವುದು ತನಗೆ ಬೇಕಾದ್ದು ಸುಲಭವಾಗಿ ಸಿಗುತ್ತಿಲ್ಲವೆಂದಾರೆ ಬಲವಂತದಿಂದಾದರೂ ಕಿತ್ತುಕೊಳ್ಳುವ ಕೆಟ್ಟ ಮನೋಭಾವನೆ. ಇದಕ್ಕಾಗಿ ಯಾವುದೇ ಬೆಲೆ ತೆರಲು ಸಿದ್ದರಾಗಿ ಇರುವುದು. ಇದು ಕೆಟ್ಟ ಗುಣವಾದರೆ, ಒಬ್ಬರು ಒಂದು ಒಳ್ಳೆಯದನ್ನು ಉಳಿಸಲು, ಮತ್ತೊಬ್ಬರಿಗಾಗಿ ಕಷ್ಟಗಳಲ್ಲಿ ಭಾಗಿಯಾಗುವುದು, ಸಹಾಯ ಮಾಡುವುದು, ತಮ್ಮ ಜೀವನವನ್ನೇ ಪಣಕ್ಕಿಡುವುದು, ಇಂತಹ ಪ್ರಸಂಗಗಳನ್ನು ಒಂದು ಉದಾಹರಣೆ ಮೂಲಕ ಹೇಳುವುದಾದರೆ ನಾವು ಬಹಳ ಹಿಂದೆ ಧರ್ಮ ಉಳಿಸಲು ಕೆಲವು ಮಹಾನೀಯರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿರುವ ಪ್ರಸಂಗಗಳನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಮುಂದಿನ ಪೀಳಿಗೆಗಾಗಿ ಅವರು ತಮ್ಮನ್ನೇ ಬಲಿ ನೀಡಿರುತ್ತಾರೆ. ಇವೆಲ್ಲವೂ ಒಳ್ಳೆಯ ಗುಣ ಎಂದು ಹೇಳಿದರೆ ತಪ್ಪಿಲ್ಲ. ಇಲ್ಲಿ ಒಳ್ಳೆಯದು ಯಾವುದು ಮತ್ತು ಕೆಟ್ಟದ್ದು ಯಾವುದು ಎಂಬುದನ್ನು ನಾವು ಅತಿ ಸೂಕ್ಷ್ಮವಾಗಿ ವಿವೇಚಿಸಬೇಕಾಗುತ್ತದೆ. ಇಲ್ಲಿ ಒಳ್ಳೆಯದು ಕೆಲವರ ಕಣ್ಣಿಗೆ ಕೆಟ್ಟದ್ದಾಗಿ ಕಂಡರೆ, ಕೆಟ್ಟದ್ದು ಕೆಲವರ ಕಣ್ಣಿಗೆ ಒಳ್ಳೆಯದಾಗಿ ಕಾಣುತ್ತದೆ. ಉದಾಹರಣೆಗೆ ಭಯೋತ್ಪಾದನೆ, ಇದನ್ನು ಮಾಡುವ ಉದ್ದೇಶ ಹೊಂದಿರುವವರಿಗೆ ಇದು ಒಳ್ಳೆಯದಾಗಿ ಕಂಡರೆ, ಇದನ್ನು ಅನುಭವಿಸುವವರಿಗೆ ಕೆಟ್ಟದ್ದಾಗಿ ಕಾಣುತ್ತದೆ. ಹಾಗೆಯೇ ಮತ ಪರಿವರ್ತನೆ, ವಸಾಹತು ಶಾಹಿ, ಧರ್ಮ ಯುದ್ದ ಹೀಗೆಯೇ ಹತ್ತು ಹಲವು ಕೆಲವರಿಗೆ ಒಳ್ಳೆಯದಾಗಿ ಕಂಡರೆ ಮತ್ತೆ ಕೆಲವರಿಗೆ ಕೆಟ್ಟದ್ದಾಗಿ ಕಾಣಿಸುತ್ತದೆ. ಇಲ್ಲಿ ಅವರವರ ಪ್ರಕಾರ ಅವರವರ ನೀತಿಯೇ ಸರಿ ಎಂಬ ನಿಲುವಿನಲ್ಲಿ ಇರುತ್ತಾರೆ. ಇಲ್ಲಿ ಎಲ್ಲ ಕಡೆ ಕೂಡ “ಕಾರಣ” ಬಹು ಮುಖ್ಯಪಾತ್ರ ವಹಿಸಿರುತ್ತದೆ. ನನ್ನ ಪ್ರಕಾರ ಇವುಗಳನ್ನೆಲ್ಲಾ ಅನುಭವಿಸುತ್ತಾ ಹೊಗಬೇಕೇ ಹೊರತು, ಇವುಗಳಿಗೆ ಶಾಶ್ವತ ಪರಿಹಾರ ಇರುವುದಿಲ್ಲ ಅನಿಸುತ್ತದೆ.

ಸಂಪಾದಕರ ನುಡಿ
ಜೀವಿಗಳಲ್ಲಿ ಒಳ್ಳೆಯದು–ಕೆಟ್ಟದು ಎಂಬ ಗುಣಗಳು ಹೇಗೆ ರೂಪುಗೊಳ್ಳುತ್ತವೆ ಎಂಬ ಮೂಲಭೂತ ಪ್ರಶ್ನೆಯನ್ನು ಈ ಲೇಖನ ಅತ್ಯಂತ ಸರಳ ಆದರೆ ಆಳವಾದ ತರ್ಕದ ಮೂಲಕ ಮುಂದಿಡುತ್ತದೆ. ಹಸಿವು, ಭಯ, ಅಸ್ತಿತ್ವದ ಹೋರಾಟ, ಸಂಪನ್ಮೂಲಗಳ ಕೊರತೆ, ಅಧಿಕಾರದ ಲಾಲಸೆ–ಇವೆಲ್ಲವೂ ಜೀವಿಗಳ ನಡೆಗೆ ಕಾರಣಗಳಾಗಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಲೇಖಕರು ಸ್ಪಷ್ಟ ಉದಾಹರಣೆಗಳ ಮೂಲಕ ವಿವರಿಸಿದ್ದಾರೆ.
ಪ್ರಾಣಿ ಪ್ರಪಂಚದಿಂದ ಆರಂಭಿಸಿ ಪ್ರಾಚೀನ ಮಾನವನ ಸಾಮಾಜಿಕ ಬದುಕು, ಅಲ್ಲಿಂದ ಆಧುನಿಕ ಯುದ್ಧಗಳು, ಭಯೋತ್ಪಾದನೆ, ವಸಾಹತುಶಾಹಿ, ಧರ್ಮಯುದ್ಧಗಳವರೆಗೆ ಸಾಗುವ ಈ ಚಿಂತನೆ, “ಗುಣ” ಎನ್ನುವುದು ಜನ್ಮಸಿದ್ಧವಲ್ಲ; ಅದು ಕಾಲ, ಸಂದರ್ಭ ಮತ್ತು ಪರಿಸ್ಥಿತಿಗಳಿಂದ ರೂಪುಗೊಳ್ಳುವ ಮಾನಸಿಕ ಪ್ರತಿಕ್ರಿಯೆ ಎಂಬ ಸಂದೇಶವನ್ನು ಬಲವಾಗಿ ಪ್ರತಿಪಾದಿಸುತ್ತದೆ. ಒಬ್ಬರಿಗೆ ಒಳ್ಳೆಯದಾಗಿ ಕಂಡದ್ದು ಮತ್ತೊಬ್ಬರಿಗೆ ಕೆಟ್ಟದ್ದಾಗಿ ಕಾಣುವ ವೈರುಧ್ಯವೇ ಮಾನವ ಸಮಾಜದ ಶಾಶ್ವತ ಸವಾಲು ಎಂಬ ಸತ್ಯವನ್ನು ಲೇಖನ ನೆನಪಿಸುತ್ತದೆ.
ಈ ಲೇಖನ ಯಾವುದೇ ತೀರ್ಪು ನೀಡುವುದಕ್ಕಿಂತಲೂ, ಓದುಗರನ್ನು ಸ್ವತಃ ಯೋಚಿಸಲು ಪ್ರೇರೇಪಿಸುತ್ತದೆ. ಒಳ್ಳೆಯದು–ಕೆಟ್ಟದು ಎಂಬ ವ್ಯಾಖ್ಯಾನಗಳು ಸ್ಥಿರವಲ್ಲ; ಅವು “ಕಾರಣ”ಗಳ ಮೇಲೆ ನಿಂತಿರುವ ಸಾಪೇಕ್ಷ ಸತ್ಯಗಳು ಎಂಬ ಅರಿವು ಮೂಡಿಸುವಲ್ಲಿ ಈ ಬರಹ ಯಶಸ್ವಿಯಾಗಿದೆ. ಪರಿಹಾರಗಳಿಗಿಂತಲೂ ಅನುಭವ ಮತ್ತು ವಿವೇಚನೆಯ ಅಗತ್ಯವನ್ನು ಒತ್ತಿ ಹೇಳುವ ಈ ಚಿಂತನಾ ಲೇಖನ, ಸಮಕಾಲೀನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದೆ.
— ಸಂಪಾದಕರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


