ಉತ್ತರ ಪ್ರದೇಶದಲ್ಲಿ ಅತ್ತೆಯೊಂದಿಗೆ ಜಗಳವಾಡಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳಿಗೆ ವಿಷ ನೀಡಿದ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ 6 ವರ್ಷದ ಮಗ ಮೃತಪಟ್ಟಿದ್ದಾನೆ. ಆಕೆಯ 10 ವರ್ಷದ ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹತ್ರಾಸ್ ನ ಗಂಗ್ ಚೌಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸರಳಾದೇವಿ ಎಂಬ ಮಹಿಳೆ ನೇಣಿಗೆ ಶರಣಾಗಿದ್ದಾಳೆ. ಪ್ರಾಥಮಿಕ ತನಿಖೆಯಲ್ಲಿ ಸರಳಾದೇವಿ ತನ್ನ ಮಕ್ಕಳನ್ನು ಬೈಯುತ್ತಿದ್ದಾಗ ಆಕೆಯ ಅತ್ತೆ ಪಚ್ಚಿನ ದೇವಿ ಮಧ್ಯ ಪ್ರವೇಶಿಸಿದ್ದು ವಾಗ್ವಾದಕ್ಕೆ ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಜಗಳ ವಿಕೋಪಕ್ಕೆ ಹೋದಾಗ ಮಹಿಳೆ ತನ್ನ ಮಕ್ಕಳಿಗೆ ವಿಷ ಹಾಕಿ ಮನೆಯೊಳಗೆ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ನಂತರ ತಜ್ಞ ಚಿಕಿತ್ಸೆಗಾಗಿ ಕಾನ್ಪುರಕ್ಕೆ ಸ್ಥಳಾಂತರಿಸಲಾಯಿತು. ಆದರೆ ಆ ವೇಳೆಗೆ ಅವರ 6 ವರ್ಷದ ಮಗ ಮತ್ತು ಸರಳಾ ದೇವಿ ಮೃತಪಟ್ಟಿದ್ದರು. 10 ವರ್ಷದ ಮಗಳ ಸ್ಥಿತಿ ಚಿಂತಾಜನಕವಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


