ಬಾಗಲಕೋಟೆ: ಉತ್ತಮ ಆರೋಗ್ಯಕ್ಕಾಗಿ ಚಿಕಿತ್ಸೆಯ ಜೊತೆಗೆ ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದ್ದು ರೇಡಿಯೋ ಕನ್ನಡಿ ಮತ್ತು ನೆರಳಿನಂತೆ ಸಮಾಜಮುಖಿಯಾಗಿ ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್.ಆರ್. ಮುಗನೂರಮಠ ಹೇಳಿದರು.
ನಗರದ ಬಿವಿವಿ ಸಂಘದ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ನೂತನ ಸಭಾಭವನದಲ್ಲಿ ಹಮ್ಮಿಕೊಳ್ಳಲಾದ ಸಂಪೂರ್ಣ ಆರೋಗ್ಯಕ್ಕಾಗಿ ಹೋಮಿಯೋಪಥಿ ರೇಡಿಯೋ ಸಂವಾದ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಹೋಮಿಯೋಪಥಿಯು ಭಾರತ ಜಗತ್ತಿಗೆ ನೀಡಿದ ವೈದ್ಯ ಪದ್ದತಿಯಾಗಿದ್ದು 12ನೇ ಶತಮಾನದಲ್ಲಿಯೇ ವೈದ್ಯ ಸಂಗಣ್ಣ ತನ್ನ ವಚನದಲ್ಲಿ ಜೀವನಕ್ರಮ ಮತ್ತು ದೇಹದ ಆರೋಗ್ಯದ ಕುರಿತು ಉಲ್ಲೇಖಿಸಿದ್ದು ಗಮನಾರ್ಹ ಸಂಗತಿ. ತನು, ಮನ, ಭಾವ ಶುದ್ದಿಗಳೆ ನಿಜವಾದ ಆರೋಗ್ಯ. ಸರಿಯಾದ ನಿದ್ರೆ, ಆಹಾರ, ವ್ಯಾಯಾಮಗಳಂತ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲು ರೇಡಿಯೋ ಸಂವಾದ, ಚರ್ಚೆ, ಹರಟೆಯಂತಹ ಕಾರ್ಯಕ್ರಮಗಳನ್ನು ಆಲಿಸುವುದು ಉತ್ತಮ ಎಂದರು.
ಕೊರೋನಾದಂತಹ ಸಂದರ್ಭದಲ್ಲಿ ಮಾದ್ಯಮಗಳು ಮತ್ತು ವೈದ್ಯರು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದ್ದು ಅದರಲ್ಲಿ ರೇಡಿಯೋ ಪಾತ್ರವು ದೊಡ್ಡದು. ಬಾನುಲಿಗಳಲ್ಲಿ ಬೇರೆ ಬೇರೆ ಕ್ಷೇತ್ರಗಳ ಕುರಿತು ಇಂದಿಗೂ ಜಾಗೃತಿ ಮತ್ತು ಮಾಹಿತಿಯನ್ನು ನೀಡುವಲ್ಲಿ ಪರಿಣಾಮಕಾರಿ ಸಮೂಹ ಮಾದ್ಯಮವಾಗಿದೆ ಎಂದರು.
ಬಿಇಸಿ ಧ್ವನಿ ಸಮುದಾಯ ಬಾನುಲಿ ಕೇಂದ್ರದ ವ್ಯವಸ್ಥಾಪಕರಾದ ಭರತ ಬಡಿಗೇರ ಮಾತನಾಡಿ ಸಮುದಾಯ ಬಾನುಲಿ ಕೇಂದ್ರಗಳು ಕಳೆದ ಇಪ್ಪತ್ತು ವರ್ಷಗಳಿಂದ ಸ್ಥಳೀಯ ಸಮುದಾಯಗಳ ಧ್ವನಿಯಾಗಿ ದೇಶದಲ್ಲಿ ಕೆಲಸ ಮಾಡುತ್ತಿವೆ ಈ ನಿಟ್ಟಿನಲ್ಲಿ ನಮ್ಮ ಬಿಇಸಿ ಧ್ವನಿಯು ಆರೋಗ್ಯದ ಕುರಿತಾದ ಜಾಗೃತಿ, ಶಿಕ್ಷಣ, ಕೃಷಿ ಹೀಗೆ ಬೇರೆ ಬೇರೆ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಾ ಬಂದಿದೆ. ಇದು ಬಾಗಲಕೋಟೆಯ ಮೊದಲ ಸಮುದಾಯ ಬಾನುಲಿ ಕೇಂದ್ರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ಅರುಣ ಹೋಳಿ, ಸಂಯೋಜಕರಾದ ಡಾ. ರವಿ ಕೋಟೆನ್ನವರ, ಡಾ. ವಿಜಯಲಕ್ಷ್ಮೀ ಪಾಟೀಲ ಸೇರಿದಂತೆ ಪ್ರಾದ್ಯಾಪಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


