ಕೊರಟಗೆರೆ : ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಅತಿಮುಖ್ಯ. ಕ್ರೀಡಾಂಗಣವು ಮಕ್ಕಳಿಗೆ ಗೆಲುವು ಮತ್ತು ಸೋಲಿನ ಜೀವನದ ಪಾಠ ಕಲಿಸುತ್ತದೆ. ನಮ್ಮ ದೇಶದ ದ್ಯಾನ್‌ಚಂದ್, ಸಚಿನ್, ಪಿ.ವಿ.ಸಿಂಧು ಅಂತಹ ಕ್ರೀಡಾಪಟುಗಳೇ ನನ್ನ ಶಾಲೆಯ ಮಕ್ಕಳ ಸಾಧನೆಗೆ ಸ್ಪೂರ್ತಿ ಎಂದು ಸಾರಂಗ ಅಕಾಡೆಮಿ ಅಧ್ಯಕ್ಷ ಅಜಯ್ ಕುಮಾರ್ ತಿಳಿಸಿದರು.
ಕೊರಟಗೆರೆ ಪಟ್ಟಣದ ಶ್ರೀರಾಘವೇಂದ್ರ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ವಾರ್ಷಿಕ ಕ್ರೀಡಾ ಕಾರ್ಯಕ್ರಮದಡಿ ಸೋಮವಾರ ಏರ್ಪಡಿಸಲಾಗಿದ್ದ ರಾಘಕ್ರೀಡೆ–2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗೆ ಶಿಕ್ಷಕರ ಜೊತೆ ಪೋಷಕರ ಪಾತ್ರ ಬಹುಮುಖ್ಯ. ಟಿವಿ ಮತ್ತು ಮೊಬೈಲ್ ಮಕ್ಕಳ ಶೈಕ್ಷಣಿಕ ಜೀವನಕ್ಕೆ ಅಪಾಯ. ಪೋಷಕರು ಮಕ್ಕಳ ಶೈಕ್ಷಣಿಕ ಜೀವನದ ಬಗ್ಗೆ ಕಡ್ಡಾಯವಾಗಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಿದೆ. ಕ್ರೀಡಾಕೂಟ ಯಶಸ್ವಿಗೆ ಕಾರಣರಾದ ಪೋಷಕರು ಮತ್ತು ಶಿಕ್ಷಕರಿಗೆ ಧನ್ಯವಾದ ಎಂದರು.
ರಾಘವೇಂದ್ರ ಶಾಲೆ ಆಡಳಿತ ಅಧಿಕಾರಿ ಕೆ.ಎನ್.ರುದ್ರೇಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯದ ಜೊತೆ ಕ್ರೀಡಾ ಚಟುವಟಿಕೆ ಬಹುಮುಖ್ಯ. ನಮ್ಮ ಶಾಲೆಯಲ್ಲಿ ಚಿಣ್ಣರಸಂತೆ, ಪುಡ್ ಪೇಸ್ಟ್, ಜಂಗಲ್ ಡೇ, ರಾಘಕ್ರೀಡೆಗೆ ಪ್ರಾಮುಖ್ಯತೆ ನೀಡಲಾಗಿದೆ. 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲೇ ಸಿಇಟಿ, ನೀಟ್ ಮತ್ತು ಜೆಇಇ ತರಬೇತಿ ನೀಡಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುತ್ತಿದ್ದೇವೆ ಎಂದರು.

ರಾಘವೇಂದ್ರ ಇಂಟರ್ ನ್ಯಾಷನಲ್ ಶಾಲೆಯ ಪ್ರಾಂಶುಪಾಲೆ ಆರ್.ಸಿ.ಜಿನ್ನಿ ಮಾತನಾಡಿ, ನಮ್ಮ ಶಾಲೆಯ ಎಲ್ಲಾ ಕಾರ್ಯಕ್ರಮಗಳಿಗೆ ಆಡಳಿತ ಮಂಡಳಿ ಸಹಕಾರ ನೀಡಿದೆ. ಕ್ರೀಡಾಕೂಟದಲ್ಲಿ ಪಾಲ್ಗೋಂಡ ಮಕ್ಕಳ ಆತ್ಮಸ್ಥೆರ್ಯ ಮತ್ತು ಸಡಗರ ಮುಗಿಲುಮುಟ್ಟಿದೆ. ರಾಘಕ್ರೀಡೆಯಲ್ಲಿ ವಿಜೇತರಾದ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಶುಭವಾಗಲಿ ಎಂದರು.
ಕಾರ್ಯಕ್ರಮದಲ್ಲಿ ರಾಘವೇಂದ್ರ ಶಾಲೆಯ ವ್ಯವಸ್ಥಾಪಕ ರವಿಕುಮಾರ್, ಆಡಳಿತ ಸಂಯೋಜಕ ಕಾವ್ಯಶ್ರೀ.ಡಿ, ಉಪಪ್ರಾಂಶುಪಾಲೆ ಷಮೀನ ಖಾನಂ, ದೈಹಿಕ ಶಿಕ್ಷಕ ವೆಂಕಟೇಶ್, ನೂರಾರು ಜನ ಪೋಷಕರು, ವಿದ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು.
ವಿದ್ಯಾರ್ಥಿಗಳ 4 ತಂಡ 15 ಆಟ:
ವಿಶ್ವದ ಶ್ರೇಷ್ಟ ಹಾಕಿ ಆಟಗಾರ ಧ್ಯಾನ್ ಚಂದ್, ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್, ದಿನದಲಿತರ ಶಿಕ್ಷಣದ ಹೋರಾಟಗಾರ್ತಿ ಜ್ಯೋತಿಬಾಪುಲೆ ರಾಷ್ಟ್ರಪತಿ ಮತ್ತು ಕ್ಷಿಪಣಿ ಮನುಷ್ಯ ಅಬ್ದುಲ್ ಕಲಾಂ ಹೆಸರಿನ 4 ತಂಡ ಮಾಡಿ ವಿದ್ಯಾರ್ಥಿಗಳಿಗೆ 15 ಕ್ಕೂ ಅಧಿಕ ಕ್ರೀಡಾ ಚಟುವಟಿಕೆ ಏರ್ಪಡಿಸಲಾಗಿತ್ತು. ಅತಿಹೆಚ್ಚು ಪದಕ ಪಡೆದ ಧ್ಯಾ ನ್‌ಚಂದ್ ತಂಡದ ವಿದ್ಯಾರ್ಥಿಗಳಿಗೆ ಸಾರಂಗ ಅಕಾಡೆಮಿಯ ಅಧ್ಯಕ್ಷ ಅಜಯ್ ಕುಮಾರ್ ಮತ್ತು ಆಡಳಿತ ಅಧಿಕಾರಿ ಕೆ.ಎನ್.ರುದ್ರೇಶ್ ೧೫೦ಕ್ಕೂ ಅಧಿಕ ಮಕ್ಕಳಿಗೆ ಪದಕ ಮತ್ತು ಪ್ರಮಾಣ ಪತ್ರ ವಿತರಣೆ ಮಾಡಿದರು.
ಮಕ್ಕಳ ಜೊತೆ ಪೋಷಕರಿಗೆ ಕ್ರೀಡೆ:
ರಾಘವೇಂದ್ರ ಶಾಲೆಯ ಪ್ರೀ ನರ್ಸರಿ ಮಕ್ಕಳಿಗೆ ಮನರಂಜನಾ ಆಟ, 1ರಿಂದ 4ನೇ ತರಗತಿಯ ಮಕ್ಕಳಿಗೆ ಅಂಡರ್ ಚೇರ್, ಕಪ್ ಅಂಡ್ ಬಾಲ್, ಬಾಲ್ ಅಂಡ್ ಸ್ಪೂನ್, ಕಪ್ ಟವರ್ ಗೇಮ್ ಆಟ ಮತ್ತು 5ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ರನ್ನಿಂಗ್ ರೇಸ್, ಕ್ರಿಕೇಟ್, ವಾಲಿಬಾಲ್, ಥ್ರೋಬಾಲ್, ಗುಂಡು ಎಸೆತ, ಚಕ್ರೆಸೆತ ಆಟ, ಪೋಷಕರಿಗೆ ಮ್ಯೂಸಿಕಲ್ ಚೇರ್, ಕಪಲ್ ಗೇಮ್ಸ್ ಮತ್ತು ಇತರೇ ಕ್ರೀಡಾ ಚಟುವಟಿಕೆ ಏರ್ಪಡಿಸಲಾಗಿತ್ತು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


