ವರದಿ: ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ : ಗ್ರಾಮೀಣ ಭಾಗದ ರೈತರ ಅನುಕೂಲಕ್ಕಾಗಿ ಗೃಹಸಚಿವ ಡಾ.ಜಿ.ಪರಮೇಶ್ವರ ಆದೇಶದಂತೆ ಅಕ್ಕಿರಾಂಪುರ ಗ್ರಾಮದಲ್ಲಿ ನೂತನವಾಗಿ ರಾಗಿ ಖರೀದಿ ಕೇಂದ್ರ ಪ್ರಾರಂಭವಾಗಿದೆ ಎಂದು ಕೊರಟಗೆರೆ ತಹಶೀಲ್ದಾರ್ ಮಂಜುನಾಥ ಕೆ. ತಿಳಿಸಿದರು.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅಕ್ಕಿರಾಂಪುರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಗುರುವಾರ ಏರ್ಪಡಿಸಲಾಗಿದ್ದ ರಾಗಿ ಖರೀದಿ ಕೇಂದ್ರದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದರು.
ಗ್ರಾಮೀಣ ರೈತರ ಮನವಿಯಿಂದ ಪ.ಪಂ. ಕಚೇರಿಯಲ್ಲಿ ಕಳೆದ 15 ದಿನದ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ಗೃಹಸಚಿವ ಡಾ.ಜಿ.ಪರಮೇಶ್ವರ ಕೊರಟಗೆರೆಯಲ್ಲಿ ರಾಗಿ ಕೇಂದ್ರ ತೆರೆಯುವಂತೆ ಸೂಚಿಸಿದ್ದರು. ಜಿಲ್ಲಾಧಿಕಾರಿ ಸೂಚನೆಯಂತೆ ಕೊರಟಗೆರೆ ತಾಲೂಕಿನ ಅಕ್ಕಿರಾಂಪುರದಲ್ಲಿ ರಾಗಿ ಖರೀದಿ ಕೇಂದ್ರ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಕೊರಟಗೆರೆ ಆಹಾರ ನಿಗಮದ ವ್ಯವಸ್ಥಾಪಕ ಟಿ.ಹೆಚ್.ರುದ್ರಪ್ಪ ಮಾತನಾಡಿ, ಅಕ್ಕಿರಾಂಪುರ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಗುರುವಾರ, ಶುಕ್ರವಾರ ಮತ್ತು ಶನಿವಾರ ರೈತರಿಂದ ರಾಗಿ ಖರೀದಿ ಮಾಡಲಾಗುತ್ತೆ. ಪ್ರತಿ ಕ್ವಿಂಟಾಲ್ ರಾಗಿ ಖರೀದಿಗೆ ಸರಕಾರದಿಂದ 4,290ರೂ ನಿಗದಿ ಮಾಡಲಾಗಿದೆ. ರೈತಯೊಬ್ಬ ರೈತನಿಂದ ಪ್ರತಿ ಎಕರ್ ಗೆ 10 ಕ್ವಿಂಟಾಲ್ ನಂತೆ ಗರಿಷ್ಟ 20 ಕ್ವಿಂಟಾಲ್ ರಾಗಿ ಖರೀದಿ ಮಾಡಲಾಗುತ್ತೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೊರಟಗೆರೆ ಆಹಾರ ನಿರೀಕ್ಷಕ ಮಂಜುನಾಥ, ಶಿರಸ್ಥೆದಾರ ಲಕ್ಷ್ಮೀ,ಹೊಳವನಹಳ್ಳಿ ಕಂದಾಯ ನಿರೀಕ್ಷಕ ಸಲ್ಮಾನ್, ಗ್ರಾಮ ಆಡಳಿತಾಧಿಕಾರಿ ಪರಶುರಾಮ್ ಸೇರಿದಂತೆ ಇತರರು ಇದ್ದರು.
ಪ್ರತಿವರ್ಷ ರಾಗಿ ಮಾರಾಟಕ್ಕೆ ನಾವು ತುಮಕೂರು ಮತ್ತು ಮಧುಗಿರಿಗೆ ತೆರಳಬೇಕಿತ್ತು. ನಮಗೇ 40 ಕಿ.ಮೀ. ದೂರ ಸಂಚಾರ ಮತ್ತು ದಿನಗಟ್ಟಲೇ ಕಾಯೋದು ತಪ್ಪಿದೆ. ಸರಕಾರ ರಾಗಿ ಖರೀದಿಸಿದ ಬಳಿಕ ತ್ವರಿತವಾಗಿ ರೈತರಿಗೆ ಹಣ ನೀಡುವಂತಾಗಲಿ. ರೈತರಿಗೆ ಅನುಕೂಲ ಕಲ್ಪಿಸಿದ ಗೃಹಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಧನ್ಯವಾದ.
— ಶಿವಪ್ಪ. ರೈತ. ಕೋಳಾಲ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4