ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸದಾ ಒಂದಿಲ್ಲೊಂದು ಎಡವಟ್ಟುಗಳನ್ನು ಮಾಡುತ್ತಲೇ ಸುದ್ದಿಯಾಗುತ್ತಿದ್ದಾರೆ. ಈ ಹಿಂದೆ ಬಟಾಟೆಯಿಂದ ಚಿನ್ನ ತೆಗೆಯಬಹುದು ಎಂಬ ಹೇಳಿಕೆ ಭಾರಿ ವೈರಲ್ ಆಗಿತ್ತು. ಇದೀಗ ಅಂತಹದ್ದೇ ಒಂದು ವಿವಾದಾತ್ಮಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿದೆ.
ಭಾರತ್ ಜೋಡೋ ನ್ಯಾಯ ಯಾತ್ರೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ರಾಹುಲ್ ಗಾಂಧಿಯವರು ರೋಡ್ ಶೋ ನಡುವೆ ನಾಯಿಗೆ ಬಿಸ್ಕೆಟ್ ತಿನ್ನಿಸುತ್ತಿರುವುದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು. ಆ ಸಮಯದಲ್ಲಿ, ನಾಯಿ ಬಿಸ್ಕತ್ತನ್ನು ತಿನ್ನಲು ನಿರಾಕರಿಸಿದಾಗ, ಅವರು ಅದೇ ಬಿಸ್ಕತ್ತನ್ನು ತನ್ನ ಕಾರ್ಯಕರ್ತನಿಗೆ ನೀಡಿರುವ ವಿಡಿಯೋ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ರಾಹುಲ್ ಗಾಂಧಿ ಅವರ ರೋಡ್ ಶೋ ವೇಳೆ ಅವರ ಜತೆಗಿದ್ದ ನಾಯಿಗೆ ಬಿಸ್ಕತ್ತು ನೀಡಿದ್ದರು. ಆದರೆ ಆ ನಾಯಿ ತಿನ್ನಲು ನಿರಾಕರಿಸಿದೆ. ಅದೇ ಸಮಯದಲ್ಲಿ ಕಾರ್ಯಕರ್ತರೊಬ್ಬರು ರಾಹುಲ್ ಗಾಂಧಿಯನ್ನು ಮಾತನಾಡಿಸಿದರು. ಆಗ ರಾಹುಲ್ ನಾಯಿಗೆ ಹಾಕಿದ್ದ ಬಿಸ್ಕತ್ತಲ್ಲೇ ಒಂದು ಬಿಸ್ಕತ್ತನ್ನು ತೆಗೆದು ಕಾರ್ಯಕರ್ತನಿಗೂ ನೀಡಿದ್ದರು. ಅದಾದ ಬಳಿಕ ಕಾರ್ಯಕರ್ತನ ಬಳಿ ನಗುತ್ತಲೇ ಮಾತು ಆರಂಭಿಸಿದ್ದರು.
ಸದ್ಯ ಈ ವಿಡಿಯೋವನ್ನು ಬಿಜೆಪಿ ಐಟಿ ಸೆಲ್ ನ ಅಮಿತ್ ಮಾಳವೀಯ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬೂತ್ ಏಜೆಂಟರನ್ನು ನಾಯಿಗಳಿಗೆ ಹೋಲಿಸಿದ್ದರು. ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಅಧ್ಯಕ್ಷರು ತನ್ನ ಕಾರ್ಯಕರ್ತನನ್ನು ನಾಯಿಯಂತೆ ನಡೆಸಿಕೊಂಡರೆ ಅಂತಹ ಪಕ್ಷವು ಕಣ್ಮರೆಯಾಗುವುದು ಪಕ್ಕಾ ಎಂದು ಮಾಳವೀಯ ಪ್ರತಿಕ್ರಿಯೆ ನೀಡಿದ್ದಾರೆ.


