ನೀವು ರೈಲು ಪ್ರಯಾಣಿಕರಾಗಿದ್ದರೆ ಪ್ರಯಾಣಕ್ಕಾಗಿ ಆನ್‌ಲೈನ್ ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡುತ್ತಿದ್ದರೆ ಮೊದಲು ಈ ಸುದ್ದಿಯನ್ನು ತಪ್ಪದೇ ಓದಿ. ಐಆರ್ಸಿಟಿಸಿ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಟಿಕೆಟ್ ಬುಕ್ ಮಾಡುವ ನಿಯಮಗಳನ್ನು ಬದಲಾಯಿಸಿದೆ. ಐಆರ್ಸಿಟಿಸಿ ನಿಯಮದ ಪ್ರಕಾರ, ಟಿಕೆಟ್ ಬುಕಿಂಗ್‌ಗಾಗಿ ನಿಮ್ಮ ಖಾತೆಯನ್ನು ನೀವು ಪರಿಶೀಲಿಸಬೇಕು ಇಲ್ಲವೇ, ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುವುದಿಲ್ಲ.
ಪರಿಶೀಲನೆ ಇಲ್ಲದೆ ಬುಕ್ ಆಗಲ್ಲ ಟಿಕೆಟ್:
ಭಾರತೀಯ ರೈಲ್ವೆಯ ಅಂಗಸಂಸ್ಥೆಯಾದ ಐಆರ್ಸಿಟಿಸಿಯ ಹೊಸ ನಿಯಮಗಳ ಅನ್ವಯ, ಬಳಕೆದಾರರು ಈಗ ಟಿಕೆಟ್ ಬುಕ್ ಮಾಡುವ ಮೊದಲು ತಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಪರಿಶೀಲಿಸಬೇಕಾಗುತ್ತದೆ. ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸದೆ ನೀವು ಆನ್ ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುವುದಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ.
ವಾಸ್ತವವಾಗಿ, ಕರೋನಾ ಸಾಂಕ್ರಾಮಿಕ ರೋಗ ಆರಂಭವಾದ ಬಳಿಕ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡದ ಐಆರ್ಸಿಟಿಸಿ ಖಾತೆಗಳನ್ನು ಹೊಂದಿರುವ ಅನೇಕ ಬಳಕೆದಾರರು ಇದ್ದಾರೆ. ಈ ನಿಯಮವು ಅಂತಹ ಜನರಿಗೆ ಮಾತ್ರ ಅನ್ವಯಿಸುತ್ತದೆ. ನೀವು ದೀರ್ಘಕಾಲದಿಂದ ಐಆರ್ಸಿಟಿಸಿ ಖಾತೆ ಮೂಲಕ ಟಿಕೆಟ್ ಬುಕ್ ಮಾಡದಿದ್ದಲ್ಲಿ ಮೊದಲು ಅದನ್ನು ಪರಿಶೀಲಿಸುವ ಅಗತ್ಯವಿದೆ. ನಂತರವಷ್ಟೇ ನೀವು ಈ ಖಾತೆಯಿಂದ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತದೆ.
ಐಆರ್ಸಿಟಿಸಿ ಖಾತೆಯನ್ನು ಮೊಬೈಲ್ ನಂಬರ್ ಮತ್ತು ಇ-ಮೇಲ್ ಮೂಲಕ ಪರಿಶೀಲಿಸಲು ಇಲ್ಲಿದೆ ಹಂತ ಹಂತ-ಹಂತದ ಪ್ರಕ್ರಿಯೆ:
ಮೊಬೈಲ್ ಮತ್ತು ಇ-ಮೇಲ್ ಅನ್ನು ಈ ರೀತಿಯಲ್ಲಿ ಪರಿಶೀಲಿಸಿಕೊಳ್ಳಿ
* ಇದಕ್ಕಾಗಿ ಮೊದಲಿಗೆ ಐಆರ್ಸಿಟಿಸಿಯ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ಗೆ ಹೋಗಿ ಮತ್ತು ಪರಿಶೀಲನೆ ವಿಂಡೋದ ಮೇಲೆ ಕ್ಲಿಕ್ ಮಾಡಿ.
* ಇಲ್ಲಿ ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ನಮೂದಿಸಿ.
* ಎರಡೂ ಮಾಹಿತಿಯನ್ನು ನಮೂದಿಸಿದ ನಂತರ, ಪರಿಶೀಲಿಸಿ ಎಂಬ ಬಟನ್ ಕ್ಲಿಕ್ ಮಾಡಿ.
* ವೆರಿಫೈ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ, ಅದನ್ನು ನಮೂದಿಸಿ ಮತ್ತು ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ.
* ಅದೇ ರೀತಿ, ಇ-ಮೇಲ್ ಐಡಿಯಲ್ಲಿ ಸ್ವೀಕರಿಸಿದ ಕೋಡ್ ಅನ್ನು ನಮೂದಿಸಿದ ನಂತರ, ನಿಮ್ಮ ಮೇಲ್ ಐಡಿಯನ್ನು ಪರಿಶೀಲಿಸಲಾಗುತ್ತದೆ.
* ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿಮ್ಮ ಖಾತೆಯಿಂದ ಆನ್‌ಲೈನ್‌ನಲ್ಲಿ ಯಾವುದೇ ರೈಲಿಗೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು.
ಈಗ ನೀವು 24 ಟಿಕೆಟ್‌ಗಳನ್ನು ಬುಕ್ ಮಾಡಬಹುದು:
ರೈಲ್ವೆ ಪ್ರಯಾಣಿಕರಿಗೆ ಮತ್ತೊಂದು ಮಹತ್ವದ ಸುದ್ದಿ ಇದೆ. ಅದೇನೆಂದರೆ ಐಆರ್ಸಿಟಿಸಿ ಬಳಕೆದಾರರ ಐಡಿಯಲ್ಲಿ ತಿಂಗಳಿಗೆ ಗರಿಷ್ಠ ಟಿಕೆಟ್ ಬುಕಿಂಗ್ ಮಿತಿಯನ್ನು 12 ರಿಂದ 24 ಕ್ಕೆ ಹೆಚ್ಚಿಸಲಾಗಿದೆ. ನೀವು ಈಗ ಆಧಾರ್ ಲಿಂಕ್ಡ್ ಯೂಸರ್ ಐಡಿಯೊಂದಿಗೆ ತಿಂಗಳಿಗೆ 24 ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಮೊದಲು ಈ ಸಂಖ್ಯೆ 12 ಆಗಿತ್ತು. ಅದೇ ರೀತಿ, ಆಧಾರ್‌ಗೆ ಲಿಂಕ್ ಮಾಡದ ಖಾತೆಯಿಂದ 6 ಬದಲಿಗೆ 12 ಟಿಕೆಟ್‌ಗಳನ್ನು ಬುಕ್ ಮಾಡಬಹುದು.
ವರದಿ: ಆಂಟೋನಿ, ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB