ದೊಡ್ಡಬಳ್ಳಾಪುರ : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೆರಡು ತಿಂಗಳು ಮಾತ್ರ ಬಾಕಿ ಉಳಿದಿದೆ, ಚುನಾವಣಾ ಪ್ರಚಾರಕ್ಕೆ ಇಳಿದಿರು ಅಭ್ಯರ್ಥಿಗಳು ಕ್ರಿಕೆಟ್ ಟೂರ್ನಮೆಂಟ್ ನಡೆಸೋದು ಈಗ ಸಾಮಾನ್ಯವಾಗಿ ಬಿಟ್ಟಿದೆ, ಹೀಗೇ ನಡೆದ ಕ್ರಿಕೆಟ್ ಟೂರ್ನಮೆಂಟ್ ಇಬ್ಬರು ಯುವಕರ ಸಾವಿಗೆ ಕಾರಣವಾಗಿದೆ, ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳದಲ್ಲಿ ಇಬ್ಬರು ಯುವಕರ ಗುಪ್ತಾಂಗಗಳಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಗ್ರಾಮದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿಯನ್ನ ಆಯೋಜಿಸಿದ್ದರು, ಕ್ರಿಕೆಟ್ ಪಂದ್ಯದ ವೇಳೆ ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಚಾಕುವಿನಿಂದ ಇಬ್ಬರು ಯುವಕರು ಗುಪ್ತಾಂಗಗಳಿಗೆ ಇರಿಯಲಾಗಿದ್ದು, ಚಾಕು ಇರಿತಕ್ಕೆ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಮೃತ ಯುವಕರನ್ನ ದೊಡ್ಡಬೆಳವಂಗಲದ ಭರತ್ (23), ಪ್ರತೀಕ್ (17) ಎಂದು ಗುರುತಿಸಲಾಗಿದೆ.
ಶುಕ್ರವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಮೊದಲಿಗೆ ಮೈದಾನದಲ್ಲಿ ವಾಹನ ಪಾರ್ಕಿಂಗ್ ಮಾಡುವ ವಿಚಾರಕ್ಕೆ ಸಂಬಂಧಿಸಿ ದೊಡ್ಡಬೆಳವಂಗಲ ಹಾಗೂ ಹುಲಿಕುಂಟೆ ಗ್ರಾಮದ ಯುವಕರ ನಡುವೆ ಗಲಾಟೆ ನಡೆದಿದೆ. ಅಷ್ಟಕ್ಕೆ ಸುಮ್ಮನಾಗದ ಯುವಕರು ಬಸ್ ನಿಲ್ದಾಣಕ್ಕೆ ಬಂದು ಹೊಡೆದಾಟಕ್ಕೆ ಇಳಿದಿದ್ದಾರೆ. ಈ ವೇಳೆ ಭರತ್ ಹಾಗೂ ಪ್ರತೀಕ್ ಅವರಿಗೆ ಎದುರಾಳಿ ಗುಂಪಿನ ಯುವಕರ ಗುಪ್ತಾಂಗಗಳಿಗೆ ಹೊಟ್ಟೆಯ ಭಾಗಕ್ಕೆ ಬಲವಾಗಿ ಇರಿದಿದ್ದಾರೆ. ಚಾಕು ಇರಿತಕ್ಕೆ ಒಳಗಾಗಿ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಯುವಕರನ್ನ ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತು, ಆದರೆ ಯುವಕರು ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ಇದ್ದು, ಸ್ಥಳಕ್ಕೆ ಬಂದ ಪೊಲೀಸರು ಉದ್ರಿಕ್ತ ಯುವಕರ ಗುಂಪಿನತ್ತ ಲಾಠಿ ಪ್ರಹಾರ ನಡೆಸಿ ಚೆದುರಿಸಿದರು. ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಡಿವೈಎಸ್ಪಿ ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ನಂತರ ಆರೋಪಿಗಳು ಪರಾರಿಯಾಗಿದ್ದಾರೆ.
ಚುನಾವಣೆ ಸನಿಹ ಇರುವ ಹಿನ್ನಲೆ ರಾಜಕಾರಣಿಗಳು ಪ್ರಚಾರದ ಗೀಳಿಗೆ ಬಿದ್ದಿದ್ದಾರೆ, ಕ್ರಿಕೆಟ್ ಸೇರಿದಂತೆ ವಿವಿಧ ಪಂದ್ಯಾವಳಿಗಳನ್ನ ಅಯೋಜನೆ ಮಾಡುವ ಮೂಲಕ ಜನರನ್ನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ, ಆದರೆ ಇದೇ ಟೂರ್ನಮೆಂಟ್ ಇಬ್ಬರು ಅಮಾಯಕ ಯುವಕರ ಬಲಿ ತೆಗೆದುಕೊಂಡಿದೆ, ಮೃತ ಯುವಕನ ತಾಯಿಯೊಬ್ಬರ ಕಾಂಗ್ರೆಸ್ ಬೇಡಾ, ಬಿಜೆಪಿಯು ಬೇಡಾ ಜೆಡಿಎಸ್ ಬೇಡಾ ನನಗೆ ನನ್ನ ಮಗ ಕೋಡಿ ಎಂದು ಕಣ್ಣೀರು ಹಾಕುತ್ತಿದದ್ದು ಎಲ್ಲರ ಮನಕಲಕುತ್ತಿತ್ತು.
ಇನ್ನೂ ಕ್ರಿಕೆಟ್ ಪಂದ್ಯಾಟ ನಡೆಸುವ ವೇಳೆ ತುರ್ತು ವೈದ್ಯಕೀಯ ವ್ಯವಸ್ಥೆಯಾಗಲಿ, ಆ್ಯಂಬುಲೆನ್ಸ್ ವ್ಯವಸ್ಥೆಗಳನ್ನಾಗಲಿ ಮಾಡದೇ ಆಯೋಜಕರು ನಿರ್ಲಕ್ಷ್ಯವಹಿಸಿದ್ದಾರೆ. ಘಟನೆ ನಡೆದ ವೇಳೆಯೇ ತಕ್ಷಣವೇ ಆ್ಯಂಬುಲೆನ್ಸ್ ವ್ಯವಸ್ಥೆ ಇದ್ದಿದ್ದರೆ ಇಬ್ಬರು ಯುವಕರ ಅಮೂಲ್ಯವಾದ ಪ್ರಾಣ ಉಳಿಯಬಹುದಿತ್ತು ಅನ್ನೋ ಮಾತುಗಳು ಕೇಳಿ ಬಂತು.
ವರದಿ: ಮಂಜು ಶ್ರವಣೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy