ಗುಜರಾತ್, ಹಿಮಾಚಲ ಪ್ರದೇಶದ ಮಾದರಿಯಂತೆ ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹಿರಿಯರಿಗೆ ಟಿಕೆಟ್ ನೀಡುವುದಿಲ್ಲ ಎಂದು ಬಿಜೆಪಿ ಹೈಕಮಾಂಡ್ ಸ್ಪಷ್ಟ ಸಂದೇಶ ರವಾನಿಸಿದೆಯಂತೆ.
ಗುಜರಾತ್ ಚುನಾವಣೆ ಮುಗಿದ ಬಳಿಕ ದಿಲ್ಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಭಾಗಿಯಾಗಿದ್ದರು.
ಮಾಜಿ ಸಿಎಂ ಯಡಿಯೂರಪ್ಪ ಅವರಂತೆ ಹಿರಿಯ ನಾಯಕರು ಅವರೇ ಸ್ವಯಂ ನಿವೃತ್ತಿ ಘೋಷಿಷಿಕೊಳ್ಳಬೇಕು. ಹಿರಿಯ ಸಚಿವರಿಗೆ ಮನವರಿಕೆ ಮಾಡಿಕೊಡುವಂತೆ ಕೆಲವು ನಾಯಕರಿಗೆ ನಿರ್ದೇಶನ ನೀಡಬೇಕು. ಸ್ವಯಂ ನಿವೃತ್ತಿ ನಿರ್ಧಾರ ತಮ್ಮದೇ, ಪಕ್ಷದಿಂದ ಮಾಡಿಸಿದ್ದಲ್ಲ. ಪಕ್ಷಕ್ಕೂ ತಮ್ಮ ನಿರ್ಧಾರಕ್ಕೂ ಸಂಬಂಧ ಇಲ್ಲ ಎಂಬುದನ್ನು ಸ್ಪಷ್ಟವಾಗಿ ಘೋಷಿಸಬೇಕು. ಕಾರ್ಯಕರ್ತರ ವಲಯ ಹಾಗೂ ನಿಮ್ಮ ಕ್ಷೇತ್ರಗಳಲ್ಲಿ ಗೊಂದಲ ಆಗದಂತೆ ನಿಗಾ ವಹಿಸಬೇಕು. ಈ ಸಂದೇಶವನ್ನು 73 ವರ್ಷದ ಮೀರಿದ ಹಿರಿಯರಿಗೆ ತಲುಪಿಸುವಂತೆ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್‍ಗೆ ಹೈಕಮಾಂಡ್ ಸೂಚನೆ ನೀಡಿದೆ.
ಬೂತ್ ಮಟ್ಟದಲ್ಲಿ ವ್ಯಕ್ತಿಗಿಂತ ಪಕ್ಷವೇ ಸ್ಟ್ರಾಂಗ್ ಪಾಲಿಸಿ ಅಳವಡಿಕೆ ಮಾಡಬೇಕು. ಕಾರ್ಯಕರ್ತರೇ ನಮ್ಮ ಶಕ್ತಿ. ಈ ನಿಟ್ಟಿನಲ್ಲಿ ಪಕ್ಷವನ್ನು ಬಲಪಡಿಸಬೇಕೆಂಬ ಸಂದೇಶವನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.


