‘ಕಾಂತಾರ ಚಾಪ್ಟರ್ 1’ ಸಿನಿಮಾ ಶೂಟಿಂಗ್ ಆರಂಭವಾದ ಬೆನ್ನಲ್ಲೇ ಒಂದಲ್ಲ ಒಂದು ಅನಾಹುತಗಳು ಚಿತ್ರತಂಡದ ಬೆನ್ನು ಬಿಡದೇ ಕಾಡುತ್ತಿದೆ. ಇದರ ಬೆನ್ನಲ್ಲೇ ಕಾಂತಾರದಿಂದ ಯಾವುದೇ ದುರಂತಗಳು ಸಂಭವಿಸ್ತಾ ಇಲ್ಲ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.
ಕಳೆದ ನವೆಂಬರ್ ನಲ್ಲಿ ‘ಕಾಂತಾರ’ ಸಿನಿಮಾ ಚಿತ್ರೀಕರಣದ ನಂತರ ತೆರಳುತ್ತಿದ್ದ 20 ಜ್ಯೂನಿಯರ್ ಆರ್ಟಿಸ್ಟ್ ಗಳಿದ್ದ ಮಿನಿ ಬಸ್ ಉಡುಪಿ ಜಿಲ್ಲೆಯ ಬೈಂದೂರಿನ ಜಡ್ಕಲ್ ಬಳಿ ಅಪಘಾತಕ್ಕೀಡಾಗಿತ್ತು. ಇದರಲ್ಲಿ 6 ಕಲಾವಿದರಿಗೆ ಸಣ್ಣಪುಟ್ಟ ಗಾಯವಾಗಿತ್ತು.
ಕಳೆದ ಜನವರಿಯಲ್ಲಿ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆರೂರು ಗ್ರಾಮದ ಬಳಿ ಕಾಂತಾರ ಶೂಟಿಂಗ್ ಗಾಗಿ ಅರಣ್ಯ ನಾಶ ಮಾಡಿರುವ ಆರೋಪ ಕೇಳಿ ಬಂದಿತ್ತು.
ಇತ್ತೀಚೆಗೆ ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಈಜಲು ತೆರಳಿದ್ದ ಈ ಸಿನಿಮಾದ ಸಹಕಲಾವಿದ ಕೇರಳ ಮೂಲದ ಎಂ.ಎಫ್ ಕಪಿಲ್ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು.
‘ಕಾಂತಾರ 1’ ಸಿನಿಮಾದಲ್ಲಿ ನಟಿಸಿರುವ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಇದೀಗ ಸಣ್ಣ ವಯಸ್ಸಿನಲ್ಲೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ರಾಕೇಶ್ ಪೂಜಾರಿ ಕಳೆದ ಏಪ್ರಿಲ್ ಕೊನೆಯ ವಾರದಲ್ಲಿ ‘ಕಾಂತಾರ -1’ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.
ಚಿತ್ರತಂಡದ ಸ್ಪಷ್ಟನೆ: ಕಾಂತಾರದಿಂದ ದುರಂತವಾಗಿಲ್ಲ, ಶೂಟಿಂಗ್ ನಲ್ಲಿ ಯಾವುದೇ ತೊಂದರೆಗಳಾಗಿಲ್ಲ, ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ವಿಜಯದಶಮಿಗೆ ಕಾಂತಾರ ದರ್ಶನ ಪಕ್ಕಾ ಎಂದು ಕಾಂತಾರ ಚಿತ್ರತಂಡ ಹೇಳಿಕೊಂಡಿದೆ. ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ದೈವದ ಕೋಪಕ್ಕೆ ಕಾಂತಾರ ಚಿತ್ರ ತಂಡದಲ್ಲಿ ಅನಾಹುತ ಸಂಭವಿಸುತ್ತಿದೆ ಎನ್ನುವ ವದಂತಿಗಳು ವ್ಯಾಪಕವಾಗಿ ಹರಡಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————