ಪಾವಗಡ: ಕನ್ನಡದಲ್ಲಿ ವೈವಿಧ್ಯಮಯವಾದ ಕತೆ, ಕವನ, ಮಹಾಕಾವ್ಯ ಇತ್ಯಾದಿಗಳ ಮೂಲಕ ರಸ ಸಾಹಿತ್ಯವನ್ನು ಕಟ್ಟಿಕೊಟ್ಟ ರಸಋಷಿ ಕವಿ ಕುವೆಂಪು ಎಂದು ಉಪನ್ಯಾಸಕರಾದ ಆಂಜನೇಯಲು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕವು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆಯ ಕುವೆಂಪು ಗೀತಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವ ವಿಶ್ವಮಾನವನಾಗುವುದು ಹೇಗೆ? ಎಂಬ ಅಂಶಗಳನ್ನು ಕವಿ ತನ್ನ ಸಾಹಿತ್ಯದಲ್ಲಿ ಸ್ಪಷ್ಟವಾಗಿ ತಿಳಿಸಿಕೊಟ್ಟಿದ್ದಾರೆ. ಅವರಲ್ಲಿನ ದೂರದೃಷ್ಟಿ ಮತ್ತು ವೈಚಾರಿಕತೆ ಬರಹಗಳು ಮಾನವನ ಜೀವನವನ್ನೇ ಬದಲಿಸುತ್ತವೆ. ಹಾಗಾಗಿ ಪ್ರತಿಯೊಬ್ಬರು ಕುವೆಂಪುರವನ್ನು ಓದಬೇಕು ಎಂದರು.
ಕನ್ನಡ ಉಪನ್ಯಾಸ ಅನಿಲ್ ಕುಮಾರ್ ಮಾತನಾಡಿ, ರಾಷ್ಟಕವಿ ಕುವೆಂಪುರವರು ವಿಶ್ವಮಾನವ ಸಂದೇಶವನ್ನು ಸಾಹಿತ್ಯದ ಮೂಲಕ ನೀಡಿದ್ದಾರೆ. ಅವರ ಪಂಚಮಂತ್ರಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು ಎಂದರು.
ಕಸಾಪ ಹೋಬಳಿ ಅಧ್ಯಕ್ಷ ಹೊ.ಮ.ನಾಗರಾಜು, ಕಾರ್ಯದರ್ಶಿ ಚಂದ್ರಶೇಖರ್ ಮುದ್ರಾಡಿ, ಶಿಕ್ಷಕಿ ವಿದ್ಯಾಶ್ರೀ ಮಾತನಾಡಿದರು.
ವಾಸವಿ ವಿದ್ಯಾನಿಕೇತನ ಮತ್ತು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಕುವೆಂಪು ಗೀತಗಳ ಗಾಯನ ಮಾಡಿದರು. ಇದೇ ವೇಳೆ ಶಾಲಾ ಗ್ರಂಥಾಲಯಕ್ಕೆ ಉಪನ್ಯಾಸಕ ಹೆಚ್.ಆರ್.ದೇವರಾಜು 30 ಕನ್ನಡ ಪುಸ್ತಕಗಳನ್ನು ನೀಡಿದರು.
ಕಸಾಪದ ವತಿಯಿಂದ ಗ್ರಾಮದ ಕುವೆಂಪು ವೃತ್ತದಲ್ಲಿ ಬೆಳಿಗ್ಗೆ ಕುವೆಂಪು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಕ್ಕಳಿಗೆ ಸಿಹಿಯನ್ನು ಹಂಚಿಲಾಯಿತು.
ಶಿಕ್ಷಕ ಹನುಮಂತರಾಯಪ್ಪ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ತಾಲ್ಲೂಕು ಕಸಾಪ ಕಾರ್ಯದರ್ಶಿ ಐ.ಎ.ನಾರಾಯಣಪ್ಪ, ಪಿ.ಹರಿಕೃಷ್ಣ, ಹೋಬಳಿ ಘಟಕದ ರಾಮಲಿಂಗಯ್ಯ, ಫಕೃದ್ಧೀನ್, ಚನ್ನಮಲ್ಲಿಕಾರ್ಜುನ, ರಘುನಂದನ್, ಶಿಕ್ಷಕರಾದ ಹರೀಶ್ ಎನ್., ನಾಗಪುಷ್ಪ. ಆರ್ ರೇಣುಕಾದೇವಿ, ಮಾಲತಿ ಭಾಗವಹಿಸಿದ್ದರು.
ವರದಿ: ನಂದೀಶ್ ನಾಯ್ಕ್, ಪಾವಗಡ