ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಲು ಜನ ಎಂತಹ ಹುಚ್ಚಾಟಕ್ಕೂ ಮುಂದಾಗುತ್ತಾರೆ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಆಘಾತಕಾರಿ ಘಟನೆಯೇ ಸಾಕ್ಷಿ. ಕೇವಲ ಒಂದು ‘ರೀಲ್ಸ್’ (Instagram Reels) ಮಾಡುವುದಕ್ಕಾಗಿ ಮಹಿಳೆಯೊಬ್ಬಳು ತನ್ನ ತಂದೆಯನ್ನೇ ಗೋಣಿ ಚೀಲದಲ್ಲಿ ತುಂಬಿ ಕೊರಿಯರ್ ಮಾಡಲು ಯತ್ನಿಸಿದ ಘಟನೆ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಂಗಳವಾರ ವೈಯಾಲಿಕಾವಲ್ ನ ವಿನಾಯಕ ಸರ್ಕಲ್ ಬಳಿ ಇರುವ ಕೊರಿಯರ್ ಕಚೇರಿಗೆ ಇಬ್ಬರು ಮಹಿಳೆಯರು ಸೇರಿದಂತೆ ಐವರ ಗುಂಪು ದೊಡ್ಡದೊಂದು ಗೋಣಿ ಚೀಲದೊಂದಿಗೆ ಆಗಮಿಸಿದೆ. ಈ ಚೀಲವನ್ನು ಪಾರ್ಸೆಲ್ ಮಾಡಬೇಕು ಎಂದು ಅವರು ಸಿಬ್ಬಂದಿಗೆ ತಿಳಿಸಿದ್ದಾರೆ. ಚೀಲದ ಒಳಗಡೆ ಏನಿದೆ ಎಂದು ಸಿಬ್ಬಂದಿ ಪ್ರಶ್ನಿಸಿದಾಗ, ಅವರು ಸರಿಯಾದ ಉತ್ತರ ನೀಡದೆ ಮೌನವಾಗಿದ್ದರು. ಇದರಿಂದ ಅನುಮಾನಗೊಂಡ ಸಿಬ್ಬಂದಿ ಚೀಲವನ್ನು ತೆರೆದು ನೋಡಿದಾಗ ಒಳಗಡೆ ವೃದ್ಧರೊಬ್ಬರು ಇರುವುದು ಕಂಡುಬಂದು ಬೆಚ್ಚಿಬಿದ್ದಿದ್ದಾರೆ.
ಗೋಣಿ ಚೀಲದೊಳಗೆ ಕುಳಿತಿದ್ದ ವೃದ್ಧ ಉಸಿರಾಟದ ತೊಂದರೆಯಿಂದ ಒದ್ದಾಡುತ್ತಿದ್ದರು. ಆದರೂ ಆ ತಂಡದವರು, “ನಾವು ಹಣ ಕೊಡುತ್ತೇವೆ, ಇವರನ್ನು ಬೇರೆ ರಾಜ್ಯಕ್ಕೆ ಪಾರ್ಸೆಲ್ ಕಳುಹಿಸಿ” ಎಂದು ಒತ್ತಾಯಿಸಿದ್ದಾರೆ. ಕೂಡಲೇ ಎಚ್ಚೆತ್ತ ಕೊರಿಯರ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದಾಗ ಇದೊಂದು ‘ರೀಲ್ಸ್’ ಪ್ರದರ್ಶನ ಎಂಬುದು ತಿಳಿದುಬಂದಿದೆ. ಮುಂಬರುವ ಯುಗಾದಿ ಮತ್ತು ರಂಜಾನ್ ಹಬ್ಬಗಳ ಸಂದರ್ಭದಲ್ಲಿ ಬಸ್ ಟಿಕೆಟ್ ದರ ಏರಿಕೆಯಾದಾಗ ಸಾಮಾನ್ಯ ಜನರು ಎಷ್ಟು ಸಂಕಷ್ಟಕ್ಕೀಡಾಗುತ್ತಾರೆ ಮತ್ತು ಜನದಟ್ಟಣೆಯ ನಡುವೆ ಹೇಗೆ ಪ್ರಯಾಣಿಸಬೇಕಾಗುತ್ತದೆ ಎಂಬ ಸಂದೇಶ ನೀಡಲು ಈ ರೀತಿ ಚಿತ್ರೀಕರಣ ಮಾಡುತ್ತಿದ್ದೆವು ಎಂದು ಕುಟುಂಬಸ್ಥರು ಸಮರ್ಥಿಸಿಕೊಂಡಿದ್ದಾರೆ.
ಪೊಲೀಸರ ಎಚ್ಚರಿಕೆ:
ಚೀಲದಲ್ಲಿದ್ದ ವೃದ್ಧರು ತಮ್ಮ ಕುಟುಂಬದವರ ವಿರುದ್ಧ ಯಾವುದೇ ದೂರು ನೀಡಿಲ್ಲ. ಹೀಗಾಗಿ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಆದರೆ, ಕೊರಿಯರ್ ಸಂಸ್ಥೆಯವರು ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕೇವಲ ಪ್ರಚಾರಕ್ಕಾಗಿ ವೃದ್ಧರ ಪ್ರಾಣದ ಜೊತೆ ಚೆಲ್ಲಾಟವಾಡಿದ ಕುಟುಂಬದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


