ಸರಗೂರು: ರಾಜ್ಯ ಸರಕಾರ ಸೆ.22 ರಿಂದ ಅ.7 ರವರೆಗೆ ನಡೆಸಲಿರುವ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಭಿಮಾನಿ ಹಾಗೂ ಅನುಯಾಯಿಗಳು ಧರ್ಮದ ಕಲಂನಲ್ಲಿ ಬೌದ್ಧ ಹಾಗೂ ಜಾತಿ ಕಾಲಂನಲ್ಲಿ ಹೊಲಯ ಎಂದು ಬರೆಸುವಂತೆ ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ವಿನಂತಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮುದಾಯದ ಭವನದಲ್ಲಿ ಭಾನುವಾರದಂದು ಬಲಗೈ ಸಮಾಜದ ಪರಿಶಿಷ್ಟ ಜಾತಿ ಪೂರ್ವಭಾವಿ ಸಭೆಯಲ್ಲಿ ಧರ್ಮದಲ್ಲಿ ಬೌದ್ಧ ಎಂದು ನಮೋದಿಸಿ ಹಾಗೂ ಅ.14 ರಂದು ಬೌದ್ಧ ಸಮ್ಮೇಳನ ಕುರಿತು ಮಾತನಾಡಿದರು.
ಪರಿಶಿಷ್ಟ ಜಾತಿಯವರು ಬೌದ್ಧ ಎಂದು ಬರೆಸಿದಲ್ಲಿ ಕೇಂದ್ರ ಸರಕಾರದ ಆದೇಶದಂತೆ ಮೀಸಲಾತಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ಬಗ್ಗೆ ದಲಿತಪರ ಸಂಘಟನೆಗಳು ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡಿ ಸಮೀಕ್ಷೆಯ ಕಲಂ 8 ರಲ್ಲಿನ 6ನೇ ಕ್ರಮ ಸಂಖ್ಯೆಯಲ್ಲಿ ಬೌದ್ಧ ಎಂದು ತಪ್ಪದೇ ಬರೆಸಲು ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.
ಇದೇ ತಿಂಗಳ 22 ರಿಂದ ಸಮೀಕ್ಷೆ ನಡೆಸಲಾಗುತ್ತಿದ್ದು, ಅಂಬೇಡ್ಕರ್ ಅವರ ಅನುಯಾಯಿಗಳಾದ ನಾವು ಅಂಬೇಡ್ಕರ್ ಅವರು ಹಿಂದೂ ಧರ್ಮ ತ್ಯಜಿಸಿ ನಮ್ಮ ಮೂಲ ಧರ್ಮವಾದ ಬೌದ್ಧ ಧರ್ಮ ಅಪ್ಪಿಕೊಂಡರು. ಹಾಗಾಗಿ ಅವರ ಮಾರ್ಗದಲ್ಲಿ ನಾವೆಲ್ಲರೂ ಸಾಗುತ್ತಾ ಅಂಬೇಡ್ಕರ್ ಆಶಯದಂತೆ ನಮ್ಮ ಧರ್ಮಕ್ಕೆ ಮರಳಿ ಹೋಗಬೇಕಿದೆ. ಈ ಹಿಂದೆ ನಡೆದ ಸಮೀಕ್ಷೆಯಲ್ಲಿ ಗೊಂದಲ ಉಂಟಾಗಿತ್ತು. ಜಾಗೃತಿ ಮೂಡಿಸುವಲ್ಲಿ ವಿಫಲರಾದೆವು. ಈಗಿನ ಸಮೀಕ್ಷೆಯಲ್ಲಿ ಧರ್ಮದ ಕಾಲಂ 6ರಲ್ಲಿ ಬೌದ್ಧ ಧರ್ಮ ಎಂದು ಜಾತಿಯ ಕಾಲಂನಲ್ಲಿ ಹೊಲಯ ಎಂದು ದಾಖಲಿಸಬೇಕು.
ಮೈಸೂರು ನಗರ ಪಾಲಿಕೆ ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಈ ಹಿಂದೆ ನಡೆದ ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ನಮಗೆ ಅನ್ಯಾಯವಾಗಿದೆ. ಅತಿ ಹೆಚ್ಚಾಗಿ ರಾಜ್ಯದಲ್ಲಿ ಬಲಗೈ ಸಮುದಾಯ ವಾಸಿಸುತ್ತಿದೆ. ಪಟ್ಟಣ ಪ್ರದೇಶದಲ್ಲಿ ವಾಸಿಸುವ ಜನರು ತಮ್ಮ ಜಾತಿ ಹೇಳಲು ಹಿಂಜರಿದ ಪರಿಣಾಮ ದಾಖಲೆಯಲ್ಲಿ ಬಲಗೈ ಸಮುದಾಯದ ಜನಸಂಖ್ಯೆ ಕಡಿಮೆ ಬಂದಿದೆ. ಈ ಸಮೀಕ್ಷೆಯಲ್ಲಿ ಹಾಗೆ ಆಗಬಾರದು. ಈ ಹಿಂದೆ ಹಿಂದೂ ಧರ್ಮ ಎಂದು ಬರೆಸಿದ್ದರು, ಹಿಂದೂ ಪದವನ್ನು ಬದಲಾಯಿಸಿ ಇನ್ನು ಮುಂದೆ ಸಮೀಕ್ಷೆಯಲ್ಲಿ ಜನರು ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ಬರೆಸಬೇಕು. ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ಬರೆಸಿದರೆ ಯಾವುದೇ ತೊಂದರೆಗಳು ಆಗುವುದಿಲ್ಲ, ಸರ್ಕಾರದಿಂದ ಸಿಗುವ ಸೌಲಭ್ಯಗಳು ಮತ್ತು ಮೀಸಲಾತಿ ಮುಂದುವರೆಯುತ್ತದೆ ಎಂದು ಹೇಳಿದರು.
ಎಚ್.ಡಿ.ಕೋಟೆ ಮತ್ತು ಸರಗೂರು ಮಹಾಸಭಾದ ಅಧ್ಯಕ್ಷರು ಹೈರಿಗೆ ಶಿವರಾಜು ಹಾಗೂ ಇಟ್ನ ರಾಜಣ್ಣ ಮಾತನಾಡಿ ಇದೇ 22ರಿಂದ ನಡೆಯುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬುದ್ಧನ ಅನುಯಾಯಿಗಳು ಜಾತಿ ಕಾಲಂನಲ್ಲಿ ಬೌದ್ಧ ಎಂದೇ ಬರಯಿಸುವಂತೆ ಮನವಿ ಮಾಡಿಕೊಂಡಿದೆ.
ಅವರು, ಅಸ್ಪೃಶ್ಯತೆ, ಅಪಮಾನಗಳನ್ನು ಎದುರಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು, ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದ್ದರು. ಆ ಪ್ರಕಾರವೇ ಸಂವಿಧಾನದಲ್ಲಿಯೂ ಮೂಲ ಧರ್ಮಕ್ಕೆ ಮರಳಲು ಅವಕಾಶ ಇದೆ. ಪರಿಶಿಷ್ಟ ಜಾತಿಯಲ್ಲಿಯೇ ಮುಂದುವರಿಯಲು ಬಯಸುವವರು ಧರ್ಮದ ಕಾಲಂನಲ್ಲಿ ಬೌದ್ಧ ಎಂದು ಬರೆಯಿಸಿ ಎನ್ನುವ ಅವಕಾಶವನ್ನು ಜಾತಿ ಕಾಲಂನಲ್ಲಿ ಪರಿಶಿಷ್ಟ ಜಾತಿಯೆಂದು ಉಲ್ಲೇಖಿಸಿ ಉಪಜಾತಿ ಕಾಲಂನಲ್ಲಿ ಮೂಲ ಜಾತಿ ನಮೂದಿಸಲು ಅವಕಾಶ ಇದೆ ಎಂದು ವಿವರಿಸಿದರು.
ಅಂಬೇಡ್ಕರ್ ಚಿಂತಕ ಮಲ್ಕುಂಡಿ ಮಹದೇವಸ್ವಾಮಿ ಮಾತನಾಡಿ, ಒಂದು ವೇಳೆ ಪೂರ್ಣ ಪ್ರಮಾಣದಲ್ಲಿ ಬೌದ್ದರೆಂದು ಘೋಷಣೆ ಮಾಡುಕೊಳ್ಳಲು ಇಚ್ಛಿಸುವವರು, ಧರ್ಮದ ಕಾಲಂ ಮತ್ತು ಜಾತಿ ಕಾಲಂನಲ್ಲಿಯೂ ಬೌದ್ಧ ಎಂದೇ ನಮೂದಿಸಬಹುದು. ಈ ಮೂಲಕ ಧಾರ್ಮಿಕ ಸ್ವಾತಂತ್ರ್ಯವನ್ನು ಬಳಸಿಕೊಂಡು ಶಿಕ್ಷಣ, ಉದ್ಯೋಗ, ರಾಜಕೀಯ ಮೀಸಲಾತಿ ಹಕ್ಕುಗಳನ್ನು ಪಡೆಯಬಹುದಾಗಿದೆ. ಜಾತಿ, ಅಸ್ಪೃಶ್ಯತೆಯ ಕರಾಳತೆಯಿಂದ ಮುಕ್ತರಾಗಿ, ಗೌರವಯುತ ಬದುಕು ಕಟ್ಟಿಕೊಳ್ಳಲು ಅವಕಾಶ ಲಭ್ಯವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಂತರಸಂತೆ ಬುದ್ಧ ವಿಹಾರ ಗೌತಮ ಬಂತೇಜಿ, ಪುರಸಭೆ ಸದಸ್ಯರು ಎಚ್ ಸಿ ನರಸಿಂಹಮೂರ್ತಿ, ನಂಜಪ್ಪ, ತುಂಬಲ ರಾಮಣ್ಣ, ಮಹಾಸಭಾ ಕಾರ್ಯದರ್ಶಿ ಭೀಮನಹಳ್ಳಿ ಸೋಮೇಶ್,ಮಾಜಿ ಅಧ್ಯಕ್ಷರು ಶಿವಣ್ಣ, ಮುದ್ದಮಲ್ಲಯ್ಯ, ಸೊಗಳ್ಳಿ ಶಿವಣ್ಣ, ಪುಟ್ಟಯ್ಯ, ಬಸವರಾಜು, ಸದಾಶಿವ, ಅಂಬೇಡ್ಕರ್ ಭವನ ಟ್ರಸ್ಟ್ ಅಧ್ಯಕ್ಷ ಸಣ್ಣಸ್ವಾಮಿ, ದಸಂಸ ಅಂಬೇಡ್ಕರ್ ವಾದ ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು, ಅನುಷಾ, ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ನಾಗರಾಜ್, ಕಾಡು ಮನೆ ಪ್ರಸನ್ನ, ಚನ್ನೀಪುರ ಮಲ್ಲೇಶ್, ತುಂಬಸೋಗೆ ನಾಗಣ್ಣ, ಅಣ್ಣಯ್ಯ ಸ್ವಾಮಿ, ಹುನಗಹಳ್ಳಿ ಗೋವಿಂದ, ಮಲ್ಲೇಶ್, ರಮೇಶ್, ಚೌಡಹಳ್ಳಿ ಜವರಯ್ಯ, ಮೂರ್ತಿ, ಗೋಪಾಲ್, ಚಿಕ್ಕದೇವ, ರವಿನೆನಪು, ಈಶ್ವರ್, ಜಿವಿಕ ಉಮೇಶ್, ಎಂ.ಡಿ.ಮಂಚಯ್ಯ,ಚನ್ನ, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ಅ 14 ಮತ್ತು 15 ರಂದು ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ನಡೆಯಲಿರುವ ಬೌದ್ಧ ಮಹಾ ಸಮ್ಮೇಳನ ಕಾರ್ಯಕ್ರಮಕ್ಕೆ ಮಲೇಷಿಯಾ, ಶ್ರೀಲಂಕಾ, ನೇಪಾಳ, ಇನ್ನೂ ಮುಂತಾದ ರಾಷ್ಟ್ರಗಳಿಂದ ಬಂತೇಜಿಯವರು ಸಮಾವೇಶಕ್ಕೆ ಭಾಗವಹಿಸುತ್ತಿದ್ದಾರೆ. ರಾಜ್ಯ ಸರ್ಕಾರದ ನಮ್ಮ ಸಮಾಜದ ಸಚಿವರಾದ ಪ್ರಿಯಾಂಕಾ ಖರ್ಗೆ ಹಾಗೂ ಡಾ.ಎಚ್.ಸಿ.ಮಹದೇವಪ್ಪ ಇನ್ನೂ ಮುಖಂಡರು ಸಮ್ಮೇಳನ ಮಾಡಬೇಕು ಎಂದು ಹೇಳಿ ಚರ್ಚೆ ಮಾಡಲಾಗಿದೆ. ತಾಲ್ಲೂಕಿನ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಬೇಕು ಎಂದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC