ಶ್ರವಣಬೆಳಗೊಳ : ಬಾಹುಬಲಿ ಸ್ವಾಮಿಯ ಅಭಿಷೇಕದ ನಿಮಿತ್ತ ವೃಷಭನಾಥ ಸ್ವಾಮಿಯ ಲಘು ಪಂಚಕಲ್ಯಾಣದ ಧಾರ್ಮಿಕ ವಿಧಿಗಳು ಆಚಾರ್ಯರು, ತ್ಯಾಗಿಗಳು ಹಾಗೂ ಭಟ್ಟಾರಕ ಸ್ವಾಮೀಜಿಗಳ ಸಾನಿಧ್ಯ ಮತ್ತು ಕ್ಷೇತ್ರದ ಪೀಠಾಧಿಪತಿಗಳಾದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಪುರೋಹಿತ ವರ್ಗದವರು ಶನಿವಾರ ನೆರವೇರಿಸಿದರು.
ಭಂಡಾರ ಬಸದಿಯ ಮುಂಭಾಗ ಬೆಳಗ್ಗೆ ವಿವಿಧ ಮಂಗಲ ವಾದ್ಯಗಳೊಂದಿಗೆ ಧ್ವಜಾರೋಹಣವನ್ನು ಬೆಂಗಳೂರಿನ ಅನಿಲ್ ಸೇಠಿ ಹಾಗೂ ವೇದಿಕೆಯ ಉದ್ಘಾಟನೆಯನ್ನು ಚಂಪಾಲಾಲ್ ಭಂಡಾರಿ ನೆರವೇರಿಸಿದರು.
ಕಂಕಣ ಧಾರಣೆಯೊಂದಿಗೆ ಮಕರ ಲಗ್ನದಲ್ಲಿ ಸಕಲೀಕರಣ, ಇಂದ್ರಪ್ರತಿಷ್ಠೆ ನಾಂದಿ ಮಂಗಲ, ಅಖಂಡ ದೀಪ ಸ್ಥಾಪನೆ ಅಂಕುರಾರ್ಪಣೆಯನ್ನು ನೆರವೇರಿಸಲಾಯಿತು. ನೂತನ ಬಾಹುಬಲಿ ಬಿಂಬಕ್ಕೆ ಧಾಮ ಸಂಪ್ರೋಕ್ಷಣೆ, ವಿಮಾನ ಶುದ್ಧಿ, ಹೋಮಗಳು ನಡೆದ ನಂತರ 14 ನದಿಗಳ ಶುದ್ಧ ಜಲದಿಂದ ಮೂರ್ತಿಯನ್ನು ಮಂತ್ರಗಳೊಂದಿಗೆ ಶುದ್ಧಿ ಮಾಡಲಾಯಿತು.
ಕಿರೀಟ ಧರಿಸಿದ್ದ ಅಷ್ಟ ಕನ್ನಿಕೆಯರು ಮತ್ತು ಶ್ರಾವಕ ಶ್ರಾವಕಿಯರು ಸೇರಿ ಬಿಂಬಕ್ಕೆ ಅರಿಷಿಣ ಕೇಸರಿಮ ಕ್ಷೀರ, ಗಂಧಗಳಿಂದ ಸಂಪ್ರೋಕ್ಷಿಸಿ ಶುದ್ಧಿ ಮಾಡಲಾಯಿತು. ರಚಿಸಿದ್ದ ಯಾಗ ಮಂಟಪದಲ್ಲಿ ವಾಸ್ತು ವಿಧಾನ, ನವಗ್ರಹ ಹೋಮಗಳು ನಡೆದವು. ಮಂಡಲದ ಮಧ್ಯೆ ರಜತದ ಪೀಠದಲ್ಲಿ ತೀರ್ಥಂಕರರ ಬಿಂಬಗಳನ್ನು ಅಭಿನವ ಶ್ರೀಗಳು ಪ್ರತಿಷ್ಠಾಪಿಸಿದರು.
ನಂತರ ಮಂಟಪದಲ್ಲಿ 9 ಮಂಗಲ ಕಲಶ,ಅಷ್ಟ ಮಂಗಲಗಳು, ಅಷ್ಟ ಆಯುಧಗಳು, ಚಾಮರಗಳು, ಧರ್ಮಧ್ವಜದ ಬಾವುಟಗಳನ್ನು ಯಂತ್ರದೊಂದಿಗೆ ಪ್ರತಿಷ್ಠಾಪಿಸಲಾಯಿತು. ಮಹಾಮಂತ್ರಗಳೊಂದಿಗೆ ಧಾರ್ಮಿಕ ವಿಧಿಗಳು ನಿರ್ವಿಜ್ಞವಾಗಿ ನೆರವೇರಲೆಂದು ದೇವಾನು ದೇವತೆಗಳಿಗೆ ಆಚಾರ್ಯರಿಗೆ ಸಮಸ್ತ ತ್ಯಾಗಿವೃಂದಕ್ಕೆ ದ್ವಾರಪಾಲಕರಿಗೆ ಕ್ಷೇತ್ರದ ಅಧಿದೇವತೆ ಮತ್ತು ಭೂಮಿಗೆ ಜಲ, ಗಂಧ, ಅಕ್ಷತೆ, ಪುಷ್ಪ, ಚರು, ದೀಪ, ಧೂಪ, ಫಲಗಳನ್ನು ಅರ್ಪಿಸಿ, ಶಾಂತಿಧಾರದೊಂದಿಗೆ ಮಹಾರ್ಘ್ಯ ಸಮರ್ಪಿಸಲಾಯಿತು.
ನೆರೆದಿದ್ದ ಭಕ್ತರು ಜಯಘೋಷಗಳನ್ನು ಮೊಳಗಿಸಿದರು. ಸಮವಸರಣ ಯಾಗ ಮಂಟಪದ ಸನ್ನಿಧಿಯಲ್ಲಿ ಭೂತ, ವರ್ತಮಾನ, ಭವಿಷ್ಯತ್ ಕಾಲದ 24 ತೀರ್ಥಂಕರರಿಗೆ ಪಂಚಕಲ್ಯಾಣದಲ್ಲಿ ಭಾಗವಹಿಸಿದ್ದ ಅತ್ತೆ ಮಾವರಾಗಿ ಶ್ಯಾಮಲ ವಿಜಯಕುಮಾರ್, ಸೌಧರ್ಮ ಇಂದ್ರ ಇಂದ್ರಾಣಿಯರಾಗಿ ರಾಜುಲ್ ಮಹಾವೀರ ಪ್ರಸಾದ್ ಜೈನ್, ಸನತ್ಕುಮಾರರಾಗಿ ಪ್ರಮೀಳಾ ಸುನೀಲ್ ಕುಮಾರ್ ಜೈನ್, ಮಹೇಂದ್ರರಾಗಿ ದೀಕ್ಷಾ ವಿವೇಕ್ ಕುಮಾರ್, ತೀರ್ಥಂಕರರ ಮಾತಾ ಪಿತರಾಗಿ ಆಶಾ ಜಿನೇಂದ್ರ, ಈಶಾನ್ಯ ಇಂದ್ರರಾಗಿ ಶ್ವೇತಾ ನೀಲೇಶ್, ಕುಭೇರರಾಗಿ ಪೂರ್ಣಿಮಾ ಅನಂತಪದ್ಮನಾಭ್, ಯಜ್ಞ ನಾಯಕರಾಗಿ ಸುಪ್ರಿಯಾ ಹೇಮಂತ್ ಕುಮಾರ್, ದಂಪತಿಗಳು ಮತ್ತು ಚಕ್ರವರ್ತಿಯಾಗಿ ಪ್ರಖರ್ ಜೈನ್, ಅಷ್ಟ ವಿಧಾರ್ಚನೆ ಮಾಡಿ ಶ್ರೀಫಲಗಳನ್ನು ಅರ್ಪಿಸಿದರು.
ಪೂಜೆಯ ನೇತೃತ್ವವನ್ನು ಎಸ್.ಡಿ.ನಂದಕುಮಾರ್ ಶಾಸ್ತ್ರಿ, ಪ್ರತಿಷ್ಠಾಚಾರ್ಯರಾದ ಶ್ರೀಮಂಧರ ಉಪಾಧ್ಯೆ, ಎಸ್.ಪಿ.ಜಿನೇಶ್ ಕುಮಾರ್, ರಾಜ್ ಕುಮಾರ್ ಶಾಸ್ತ್ರಿ ಹಾಗೂ ಪಂಡಿತ ವರ್ಗ ವಹಿಸಿದ್ದರು. ಪೂಜಾಷ್ಟಕಗಳಿಗೆ ಸಂಗೀತ ಹಾಡುಗಾರಿಕೆಯನ್ನು ಉದ್ಗಾಂವ್ ನ ಸಚಿನ್ ಚೌಗಲೇ ತಂಡದವರು ನಿರ್ವಹಿಸಿದರು.
ಸಾನಿಧ್ಯವನ್ನು ಆಚಾರ್ಯ ಕುಂಥುಸಾಗರ ಮಹಾರಾಜರು ಮತ್ತು ಸಂಘಸ್ಥ ತ್ಯಾಗಿಗಳು ಮಾತಾಜಿಯವರು ಅರಹಂತಗಿರಿಯ ಧವಲಕೀರ್ತಿ ಸ್ವಾಮೀಜಿ, ವಿಚಾರಪಟ್ಟ ಕ್ಷುಲ್ಲಕ ಪ್ರಮೇಯ ಸಾಗರ ಸ್ವಾಮಿಜಿ ಪಾಲ್ಗೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4