ಕೋಲಾರ: ಮುಸ್ಲಿಮರಿಗೆ ನೀಡಲಾಗಿರುವ ಮೀಸಲಾತಿಯನ್ನು ರದ್ದುಗೊಳಿಸಿ, ಅದನ್ನು ದಲಿತರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಹಂಚಿಕೆ ಮಾಡಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಶುಕ್ರವಾರ ನಡೆದ ರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಒಳಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ. ಧರ್ಮಾಧಾರಿತವಾಗಿ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಆದ್ದರಿಂದ ಮುಸ್ಲಿಮರ ಮೀಸಲಾತಿಯನ್ನು ಹಿಂಪಡೆದು, ನ್ಯಾಯ ಸಿಗದ ಸಮುದಾಯಗಳಿಗೆ ಮತ್ತು ದಲಿತರಿಗೆ ನೀಡಬೇಕು ಎಂದು ಅವರು ಪ್ರತಿಪಾದಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿವೇಶನದಲ್ಲಿ ನಡೆದುಕೊಂಡ ರೀತಿ ‘ಕೊತ್ವಾಲ್ ರಾಮಚಂದ್ರ’ನ ವರ್ತನೆಯನ್ನು ನೆನಪಿಸುವಂತಿತ್ತು. ಇಂತಹವರು ಮುಖ್ಯಮಂತ್ರಿಯಾದರೆ ರಾಜ್ಯದ ಗತಿ ಏನು? ಎಂದು ಯತ್ನಾಳ್ ಪ್ರಶ್ನಿಸಿದರು.
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲು ಬಿಜೆಪಿಯವರ ಬೆಂಬಲವನ್ನೂ ಯಾಚಿಸುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ಎಂದಿಗೂ ಒಪ್ಪುವುದಿಲ್ಲ ಎಂದು ಅವರು ಭವಿಷ್ಯ ನುಡಿದರು.
ಅಧಿವೇಶನದಲ್ಲಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸುವ ಬದಲು ಐಪಿಎಲ್ ಟಿಕೆಟ್ಗಾಗಿ ಶಾಸಕರು ಬೇಡಿಕೆ ಇಟ್ಟಿರುವುದು ನಾಚಿಕೆಗೇಡಿನ ಸಂಗತಿ. ಇದು ಶಾಸಕರ ಸ್ಥಾನದ ಘನತೆಯನ್ನು ಕುಗ್ಗಿಸಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಬರುವ ಮೇ ತಿಂಗಳಲ್ಲಿ ಚಿತ್ರದುರ್ಗ ಅಥವಾ ದಾವಣಗೆರೆಯಲ್ಲಿ ಬೃಹತ್ ‘ಜಾಗೃತ ಹಿಂದೂ ಸಮಾವೇಶ’ ನಡೆಸಲಾಗುವುದು. 2028ರಲ್ಲಿ ರಾಜ್ಯದಲ್ಲಿ ಗಟ್ಟಿಯಾದ ಹಿಂದೂ ಪರ ವ್ಯಕ್ತಿಯೇ ಮುಖ್ಯಮಂತ್ರಿಯಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರವು ಪಾಕಿಸ್ತಾನ ಸರ್ಕಾರದಂತೆ ವರ್ತಿಸುತ್ತಿದೆ ಎಂದು ಆರೋಪಿಸಿದ ಯತ್ನಾಳ್, ಮುಸ್ಲಿಂ ಮತಗಳ ಧ್ರುವೀಕರಣದ ಬಗ್ಗೆಯೂ ಎಚ್ಚರಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


