ಬೆಂಗಳೂರು: ಜನ ಸರ್ಕಾರ ವಿರುದ್ಧ ದಂಗೆ ಏಳುವ ಮುನ್ನ ಸಮರೋಪಾದಿಯಲ್ಲಿ ರಸ್ತೆಗಳ ದುರಸ್ತಿ ಮಾಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಬೆಂಗಳೂರಿನ ಜನತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ದಂಗೆ ಏಳುವ ಮುನ್ನ, ರಸ್ತೆ ಗುಂಡಿಗಳಿಂದ ಇನ್ನಷ್ಟು ಅಪಘಾತಗಳು, ಸಾವು-ನೋವು ಸಂಭವಿಸುವ ಮುನ್ನ ಸಮರೋಪಾದಿಯಲ್ಲಿ ರಸ್ತೆಗಳ ದುರಸ್ತಿ ಮಾಡಬೇಕು ಎಂದಿದ್ದಾರೆ.
ಬೆಂಗಳೂರು ನಗರಕ್ಕೆ 25,000 ಕೋಟಿ ವಿಶೇಷ ಅನುದಾನ ನೀಡಿ, ರಸ್ತೆಗಳು, ರಾಜಕಾಲುವೆಗಳನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬಯಲಾಯ್ತು ಬ್ರ್ಯಾಂಡ್ ಬೆಂಗಳೂರಿನ ಮುಖವಾಡ, ಬೀದಿಗೆ ಬಂತು ಕಾಂಗ್ರೆಸ್ ಸರ್ಕಾರದ ಬಂಡವಾಳ. ಇಷ್ಟಕ್ಕೂ ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಕಾಂಗ್ರೆಸ್ ಸರ್ಕಾರ ಕಳೆದ 15 ತಿಂಗಳ ಆಡಳಿತದಲ್ಲಿ ಬೆಂಗಳೂರಿಗೆ ಬಿಡಿಗಾಸು ಅನುದಾನ ಸಹ ನೀಡಿಲ್ಲ ಎಂದು ಕಿಡಿಕಾರಿದರು.
ಒಂದೇ ಮಳೆಗೆ ಬೆಂಗಳೂರಿನ ತುಂಬಾ ಬಾಯ್ತೆರೆದಿರುವ ಯಮಸ್ವರೂಪಿ ರಸ್ತೆ ಗುಂಡಿಗಳು ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅಸಲಿಯತ್ತು ಏನು ಎಂಬುದನ್ನ ಬಟಾ ಬಯಲು ಮಾಡಿದೆ. 40% ಕಮಿಷನ್ ಸರ್ಕಾರ ಎಂದು ಸುಳ್ಳು, ಅಪಪ್ರಚಾರದ ಮೂಲಕ ಕನ್ನಡಿಗರಿಗೆ ಟೋಪಿ ಹಾಕಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ, ತನ್ನ ಭ್ರಷ್ಟಾಚಾರದ ಹಸಿವು, ದಾಹ ನೀಗಿಸಿಕೊಳ್ಳಲು ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರವನ್ನು ಬಲಿ ಕೊಡುತ್ತಿದೆ ಎಂದು ದೂರಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296