ಬೆಂಗಳೂರು: ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಜ. 26ರಂದು ಗಣರಾಜ್ಯೋತ್ಸವ ಸಮಾರಂಭ ನಡೆಯಲಿದ್ದು, ಎರಡು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 1,500 ಮಕ್ಕಳು ಭಾಗವಹಿಸಲಿದ್ದಾರೆ.
ಮೈದಾನದಲ್ಲಿ ಪೂರ್ವಭಾವಿ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಹೆಗ್ಗನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ 700 ಮಕ್ಕಳು, ಪಿಳ್ಳಣ್ಣಗಾರ್ಡನ್ ಬಿಬಿಎಂಪಿ ಸಂಯುಕ್ತ ಪದವಿಪೂರ್ವ ಕಾಲೇಜಿನ 700 ಮಕ್ಕಳು ನೃತ್ಯ ಮಾಡಲಿದ್ದಾರೆ ಎಂದು ತಿಳಿಸಿದರು.
ಕೇರಳ ಪೊಲೀಸ್, ಸ್ಕೌಟ್ಸ್-ಗೈಡ್ಸ್, ಎನ್ ಸಿಸಿ, ಸೇವಾದಳ ಮತ್ತು ವಿವಿಧ ಶಾಲೆಗಳ ಮಕ್ಕಳು ಕವಾಯತು ಮತ್ತು ಬ್ಯಾಂಡ್ ಗಳನ್ನು 38 ತುಕಡಿಗಳಲ್ಲಿ 1,150 ಮಂದಿ ನಡೆಸಿಕೊಡಲಿದ್ದಾರೆ. ಎಂಇಜಿ ತಂಡ ‘ಕಳರಿಪಯಟ್ಟು’, ಎಎಸ್ ಸಿ ಸೆಂಟರ್ ನ ಅನೀಶ್ ಥಾಮಸ್ ತಂಡದವರು ‘ದ್ವಿಚಕ್ರ ವಾಹನ ಸಾಹಸ’ ಪ್ರದರ್ಶನ ನೀಡಲಿದ್ದಾರೆ. ಎಸ್ ಎಫ್ ವಿಶೇಷ ತಂಡದ ಜೇಮ್ಸ್ ಅವರು ‘ಅಡಗು ತಾಣಗಳಲ್ಲಿ ಹೊಕ್ಕು ದಾಳಿ ಮಾಡುವ ನಿರೂಪಣೆ’ಯನ್ನು ನಡೆಸಿ ಕೊಡಲಿದ್ದಾರೆ ಎಂದು ಹೇಳಿದರು.
ನಗರ ಪೊಲೀಸ್ ಕಮಿಷನರ್ ದಯಾನಂದ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಉಪಸ್ಥಿತರಿದ್ದರು.


