ಬೆಂಗಳೂರು: ರಾಜ್ಯದಲ್ಲಿ ವಿವಿಧ ಸಾರ್ವಜನಿಕ ಯೋಜನೆಗಳಿಗಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯಸಮ್ಮತ ಪರಿಹಾರ ಒದಗಿಸಲು ಆಸ್ತಿಗಳ ‘ಮಾರ್ಗಸೂಚಿ ದರ’ವನ್ನು (Guideline Rate) ಕಾಲಕಾಲಕ್ಕೆ ಪರಿಷ್ಕರಿಸುವುದು ಅತ್ಯಗತ್ಯ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ಬುಧವಾರ ವಿಧಾನಪರಿಷತ್‌ನಲ್ಲಿ ಜೆಡಿಎಸ್ ಸದಸ್ಯ ಕೆ.ಎಸ್. ನವೀನ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರಿಗೆ ಆಗುತ್ತಿರುವ ಆರ್ಥಿಕ ನಷ್ಟದ ಬಗ್ಗೆ ವಿವರಣೆ ನೀಡಿದರು.
ಪ್ರಸ್ತುತ ಅಧಿಕೃತ ಮಾರ್ಗಸೂಚಿ ದರ ಮತ್ತು ಮಾರುಕಟ್ಟೆ ದರಗಳ ನಡುವೆ ಭಾರಿ ವ್ಯತ್ಯಾಸವಿದೆ. ಕೆಲವು ಕಡೆ ಮಾರ್ಗಸೂಚಿ ದರ ಕೇವಲ 2 ಲಕ್ಷ ರೂಪಾಯಿ ಇದ್ದರೆ, ಮಾರುಕಟ್ಟೆ ದರ 80 ಲಕ್ಷ ರೂಪಾಯಿಗಳವರೆಗೂ ಇರುತ್ತದೆ. ಈ ಅಂತರದಿಂದಾಗಿ ರೈತರಿಗೆ ಕಡಿಮೆ ಪರಿಹಾರ ಸಿಗುತ್ತಿದೆ.
ಮಾರ್ಗಸೂಚಿ ದರ ಮತ್ತು ಮಾರುಕಟ್ಟೆ ದರಗಳ ನಡುವಿನ ವ್ಯತ್ಯಾಸವೇ ‘ಚೆಕ್’ ಮತ್ತು ‘ಕ್ಯಾಶ್’ ಮೂಲಕ ನಡೆಯುವ ಕಪ್ಪು ಹಣದ ವ್ಯವಹಾರಗಳಿಗೆ ಪ್ರಮುಖ ಕಾರಣವಾಗಿದೆ. ದರ ಪರಿಷ್ಕರಣೆಯಿಂದ ಇದನ್ನು ತಡೆಗಟ್ಟಬಹುದು ಎಂದು ಸಚಿವರು ಅಭಿಪ್ರಾಯಪಟ್ಟರು.
2013ರ ಭೂಸ್ವಾಧೀನ ಕಾಯ್ದೆಯ ಪ್ರಕಾರ, ಒಮ್ಮೆ ಪ್ರಾಥಮಿಕ ಅಧಿಸೂಚನೆ ಹೊರಬಂದ ನಂತರ ಮಾರ್ಗಸೂಚಿ ಮೌಲ್ಯವನ್ನು ಪರಿಷ್ಕರಿಸಲು ಬರುವುದಿಲ್ಲ. ಬದಲಾಗಿ, ಅಧಿಸೂಚನೆಗೆ ಮೊದಲಿರುವ ದರ ಅಥವಾ ಹಿಂದಿನ ಮೂರು ವರ್ಷಗಳ ಸರಾಸರಿ ಮಾರಾಟ ಪತ್ರಗಳ ಆಧಾರದ ಮೇಲೆ ಪರಿಹಾರ ನಿರ್ಧರಿಸಲಾಗುತ್ತದೆ. ಮಾರ್ಗಸೂಚಿ ದರವನ್ನು ನಿಯಮಿತವಾಗಿ ಹೆಚ್ಚಿಸುವುದರಿಂದ, ಭೂಮಿ ನೀಡುವ ರೈತರಿಗೆ ಮಾರುಕಟ್ಟೆ ದರಕ್ಕೆ ಹತ್ತಿರವಿರುವ ನ್ಯಾಯಯುತವಾದ ಪರಿಹಾರ ಮೊತ್ತ ದೊರೆಯಲು ಸಾಧ್ಯವಾಗುತ್ತದೆ ಎಂದು ಸಚಿವರು ವಿವರಿಸಿದರು.
ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಮತ್ತು ರೈತರ ಹಿತರಕ್ಷಣೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಅವರು ಸದನಕ್ಕೆ ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


