ಬೀದರ್: ಇದು ರಸ್ತೆಯೋ, ಗದ್ದೆಯೋ ಅಂತ ಕ್ಷಣ ಕಾಲ ನೋಡಿದರೆ ತಿಳಿಯದೇ ಜನ ದಂಗಾಗುತ್ತಾರೆ. ಈ ರಸ್ತೆಯ ದುರಸ್ತಿ ಮಾಡಿಕೊಡಿ ಎಂದು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ, ದಪ್ಪ ಚರ್ಮದ ಅಧಿಕಾರಿಗಳ ಕಿವಿಗಂತೂ ಸಾರ್ವಜನಿಕರ ಅಳಲು ಕೇಳಿಸಿಲ್ಲ…
ಹೌದು..! ಇಂತಹದ್ದೊಂದು ದುಸ್ಥಿತಿ ಕಂಡು ಬಂದಿರೋದು ಬೀದರ್ ಜಿಲ್ಲೆಯ ಔರಾದ ತಾಲೂಕಿನ ಬೆಳಕುಣಿ ಚೌದ್ರಿ ಗ್ರಾಮದ ವಾರ್ಡ್ ನಂಬರ್ 2 ರಲ್ಲಿ. ಇಲ್ಲಿ ಸ್ವಲ್ಪ ಮಳೆ ಬಂದ್ರೆ ರಸ್ತೆ ಕೆಸರುಮಯವಾಗಿ ಅಕ್ಷರಶಃ ಗದ್ದೆಯಾಗಿ ಮಾರ್ಪಡುತ್ತಿದೆ. ಈ ವಿಚಾರದ ಬಗ್ಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಗಮನಕ್ಕೆ ಸಾರ್ವಜನಿಕರು ತಂದರೂ ಅವರು ಕ್ರಮಕೈಗೊಳ್ಳದೇ ನಿರ್ಲಕ್ಷ್ಯವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಶಿಕ್ಷಕರು ಸತ್ಯನಾರಾಯಣ ರಾಜಪುತ, ರಸ್ತೆ ಅವ್ಯವಸ್ಥೆ ಬಗ್ಗೆ ಹಲವು ಬಾರಿ ಬೆಳಕುಣಿ ಚೌದ್ರಿ ಗ್ರಾಮ ಪಂಚಾಯಿತಿ ಅಧಿಕಾರಿ ಪಿಡಿಒ ಗಮನಕ್ಕೆ ತಂದರು ಕೂಡ ಏನು ಪ್ರಯೋಜನ ಆಗಿಲ್ಲ, ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ ವಹಿಸುತ್ತಿದ್ದಾರೆ. ಹಲವು ವರ್ಷಗಳಿಂದ ಸುಸಜ್ಜಿತ ರಸ್ತೆಯನ್ನ ಮಾಡಿಕೊಡುವಂತೆ ಮನವಿ ಮಾಡುತ್ತಿದ್ದೇವೆ. ಆದರೆ ಸಾರ್ವಜನಿಕರಿಗೆ ಅವರು ಸ್ಪಂದಿಸುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆಗೆ ಗಮನ ಹರಿಸಬೇಕು, ಒಂದು ವಾರದೊಳಗೆ ರಸ್ತೆ ನಿರ್ಮಾಣ ಮಾಡಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸತ್ಯನಾರಾಯಣ ರಾಜಪುತ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಗ್ರಾಮಸ್ಥರಿಗೆ ಸರಿಯಾದ ರಸ್ತೆ, ಮೂಲಭೂತ ಸೌಕರ್ಯವನ್ನು ಮಾಡಿಸಿಕೊಡಲೂ ಸಾಧ್ಯವಾಗದ ಅಧಿಕಾರಿಗಳು ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದು ಇದರಿಂದಲೇ ತಿಳಿಯುತ್ತದೆ. ಪಿಡಿಒ ಅವರು ಸಾರ್ವಜನಿಕರ ಕೆಲಸ ಮಾಡಿಕೊಡಲು ವಿಫಲವಾದರೆ ಅವರ ವಿರುದ್ಧ ತಕ್ಷಣವೇ ಕ್ರಮಕೈಗೊಂಡು, ಜನ ಸ್ನೇಹಿಯಾಗಿ ಕೆಲಸ ಮಾಡುವ ಪಿಡಿಓ ಅವರನ್ನ ನೇಮಕ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಇನ್ನಾದರೂ ಸೂಕ್ತ ಕ್ರಮವಹಿಸುತ್ತಾರಾ ಅಥವಾ ಸಾರ್ವಜನಿಕರ ಪ್ರತಿಭಟನೆ ಎದುರಿಸುತ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC