ತುಮಕೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಜನವರಿ 1ರಿಂದ 31ರವರೆಗೆ ರಾಜ್ಯ ವ್ಯಾಪಿ ರಸ್ತೆ ಸುರಕ್ಷಾ ಮಾಸಾಚರಣೆ ನಡೆಸಲಾಗುತ್ತದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಶಶಿಧರ್ ಶೆಟ್ಟಿ ಹೇಳಿದ್ದಾರೆ.
ಬುಧವಾರ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ಕುರಿತು ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, 2019 ರಿಂದ ಇಂದಿನವರೆಗೆ ರಾಜ್ಯದಲ್ಲಿ ಒಟ್ಟು 2,13,192 ಅಪಘಾತ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 60,115 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬೆಂಗಳೂರು ನಂತರ ತುಮಕೂರು ಜಿಲ್ಲೆಯಲ್ಲಿ ಹೆಚ್ಚು ಅಪಘಾತಗಳು ದಾಖಲಾಗುತ್ತಿವೆ ಎಂದ ಅವರು, ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆ, ತಾಲೂಕು, ಗ್ರಾಮ ಮಟ್ಟದಲ್ಲಿ ಹಾಗೂ ಶಾಲಾ-ಕಾಲೇಜು ವ್ಯಾಪ್ತಿಯಲ್ಲಿ ಅಧಿಕಾರಿಗಳ ಸಹಯೋಗದೊಂದಿಗೆ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ, ರ‍್ಯಾಲಿ, ಜಾಗೃತಿ ಭಾಷಣ, ಪೋಸ್ಟರ್ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಚಿಸಲಾಗಿದೆ. ನಾಗರಿಕರು ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು, ಹೆಲ್ಮೆಟ್ ಮತ್ತು ಸೀಟ್‌ಬೆಲ್ಟ್ ಕಡ್ಡಾಯವಾಗಿ ಬಳಸಬೇಕು, ಅತಿವೇಗ ಮತ್ತು ನಿರ್ಲಕ್ಷ್ಯ ಚಾಲನೆ ತಪ್ಪಿಸಬೇಕು ಎಂದು ಅವರು ಹೇಳಿದರು.
ರಸ್ತೆ ಸುರಕ್ಷಾ ಮಾಸಾಚರಣೆ ಯಶಸ್ವಿಯಾಗಲು ಸಾರ್ವಜನಿಕರು, ವಿದ್ಯಾರ್ಥಿಗಳು, ಸ್ವಯಂಸೇವಕ ಸಂಘಟನೆಗಳ ಸಹಕಾರ ಅಗತ್ಯವಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


