ಬೆಂಗಳೂರು: ಪ್ರಿಯತಮೆಗೆ ಹಣ, ಆಭರಣ ಕೊಡಲು ತಮ್ಮ ಸಂಬಂಧಿಕರ ಮನೆಯಲ್ಲಿಯೇ ನಗದು ಸೇರಿದಂತೆ 52.71 ಲಕ್ಷ ರೂ. ಬೆಲೆಯ ಚಿನ್ನಾಭರಣ ಕಳ್ಳತನ ಮಾಡಿ ನಾಟಕವಾಡಿದ್ದ ಯುವಕನೊಬ್ಬನನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗಟ್ಟಿಹಳ್ಳಿಯ ನಿವಾಸಿ ಶ್ರೇಯಸ್(22) ಬಂಧಿತ ಆರೋಪಿ. ಈತ ಕೋಳಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ತಮ್ಮದೇ ಊರಿನ ಸಂಬಂಧಿಕರಾದ ಹರೀಶ್ ಎಂಬುವವರ ಮನೆಗೆ ಈ ಶ್ರೇಯಸ್ ಆಗಾಗ್ಗೆ ಹೋಗುತ್ತಿದ್ದ. ಕಳೆದ ತಿಂಗಳ 14ರಂದು ಹರೀಶ್ ಅವರ ತಾಯಿ ಮನೆಗೆ ಬೀಗಹಾಕಿ ಪಕ್ಕದ ಬೀದಿಯಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದರು.
ಆ ಸಂದರ್ಭದಲ್ಲಿ ಮನೆಯ ಬಳಿ ಬಂದ ಶ್ರೇಯಸ್ ಬೀಗ ಮುರಿದು 3.46 ಲಕ್ಷ ರೂ. ನಗದು, 416 ಗ್ರಾಂ ಚಿನ್ನವನ್ನು ದೋಚಿ ಹೋಗಿದ್ದನು.ಕಳ್ಳತನ ಮಾಡಿದ್ದ. ಕೆಲವು ಆಭರಣಗಳನ್ನು ಬನ್ನೇರುಘಟ್ಟದಲ್ಲಿ ವಾಸವಿರುವ ತನ್ನ ಪ್ರಿಯತಮೆಗೆ ಕೊಟ್ಟಿದ್ದು, ಉಳಿದ ಆಭರಣಗಳನ್ನು ಪರಪ್ಪನ ಅಗ್ರಹಾರದಲ್ಲಿರುವ ಮುತ್ತೂಟ್ ಫೈನಾನ್ಸ್ ನಲ್ಲಿ ಅಡವಿಟ್ಟಿದ್ದ. ನಗದನ್ನು ಸೂರ್ಯಸಿಟಿಯಲ್ಲಿರುವ ಬ್ಯಾಂಕ್ ನ ತನ್ನ ಖಾತೆಗೆ ಜಮಾ ಮಾಡಿಕೊಂಡಿದ್ದ.
ನಂತರ ಹರೀಶ್ ಅವರ ಮನೆ ಬಳಿ ಬಂದ ಶ್ರೇಯಸ್ ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ನೀವು ಬೇಗ ಪೊಲೀಸರಿಗೆ ದೂರು ಕೊಡಿ ಎಂದು ಅವನೇ ಪೊಲೀಸರಿಗೆ ದೂರು ಕೊಡಿಸಿದ್ದ.
ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ತಾಂತ್ರಿಕ ಸಾಕ್ಷ್ಯಾಧಾರದ ಮೇಲೆ ಶ್ರೇಯಸ್ ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಪೊಲೀಸರು ಆತನನ್ನು ಬಂಧಿಸಿ ಸಂಬಂಧಿಕರ ಮನೆಯಲ್ಲಿ ಕದ್ದಿದ್ದ ಹಣ, ಆಭರಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC