ಡೆಹ್ರಾಡೂನ್: ಇಲ್ಲಿನ ಜನನಿಬಿಡ ರಾಜ್ ಪುರ ರಸ್ತೆಯಲ್ಲಿರುವ ಶೋರೂಂನಲ್ಲಿ ಮೂವರು ಶಸ್ತ್ರಸಜ್ಜಿತ ವ್ಯಕ್ತಿಗಳು 15 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ ಈ ಘಟನೆ ನಡೆದಿದ್ದು ದರೋಡೆಕೋರರು ಶೋರೂಮ್ ಗೆ ಪ್ರವೇಶಿಸಿ, ಬಂದೂಕು ತೋರಿಸಿ ಸಿಬ್ಬಂದಿಯನ್ನು ಹಿಡಿದಿಟ್ಟುಕೊಂಡು ಚಿನ್ನಾಭರಣಗಳನ್ನು ಚೀಲಗಳಲ್ಲಿ ತುಂಬಿದ ನಂತರ ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಡೆಹ್ರಾಡೂನ್ ಹಿರಿಯ ಪೊಲೀಸ್ ಅಧೀಕ್ಷಕ ಅಜಯ್ ಸಿಂಗ್ ತಿಳಿಸಿದ್ದಾರೆ.
ಶೋರೂಂ ನಲ್ಲಿ ದರೋಡೆ ನಡೆಸುತ್ತಿದ್ದಾಗ ಅವರ ಇಬ್ಬರು ಸಹಚರರು ಹೊರಗೆ ನಿಂತಿದ್ದರು ಎಂದು ಅವರು ಹೇಳಿದರು.
ಅಧ್ಯಕ್ಷ ದ್ರೌಪದಿ ಮುರ್ಮು ರಾಜ್ಯದ 23ನೇ ಸಂಸ್ಥಾಪನಾ ದಿನಾಚರಣೆಯನ್ನು ಪೊಲೀಸ್ ಲೈನ್ ನಲ್ಲಿ ಉದ್ದೇಶಿಸಿ ಮಾತನಾಡುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತೆಯನ್ನು ಬಿಗಿಗೊಳಿಸಿದಾಗ ಹಗಲು ದರೋಡೆ ನಡೆದಿದೆ.
ನಾಲ್ಕು ಪೊಲೀಸ್ ತಂಡಗಳು ದರೋಡೆಕೋರರಿಗಾಗಿ ಶೋಧ ನಡೆಸುತ್ತಿದ್ದು, ಅಪರಾಧಕ್ಕೆ ಬಳಸಿದ ಎರಡು ಮೋಟಾರ್ ಸೈಕಲ್ ಗಳನ್ನು ಸಹಸ್ ಪುರ ಪ್ರದೇಶದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ ಎಸ್ ಪಿ ತಿಳಿಸಿದ್ದಾರೆ.
ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ವಿಶ್ಲೇಷಿಸಲಾಗುತ್ತಿದೆ ಮತ್ತು ಫೊರೆನ್ಸಿಕ್ ತಜ್ಞರು ಶೋರೂಮ್ನಿಂದ ಬೆರಳಚ್ಚುಗಳನ್ನು ಸಂಗ್ರಹಿಸಿದ್ದಾರೆ ಅದನ್ನು ಪರಿಶೀಲಿಸಲಾಗುತ್ತಿದೆ ಎಂದು ಸಿಂಗ್ ಹೇಳಿದರು. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ದರೋಡೆಕೋರರನ್ನು ಆದಷ್ಟು ಬೇಗ ಬಂಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.


