ಅಶೋಕ ನಗರದ ಶಿಕ್ಷಕ ಕೊಟ್ರಪ್ಪ ಎಂಬುವವರ ಮನೆಯಲ್ಲಿ ರಾತ್ರಿ ಎಲ್ಲರು ಊಟ ಮುಗಿಸಿ 11 ಗಂಟೆಗೆ ಮಲಗಿದ್ದರು. ರಾತ್ರಿ ಒಳಗೆ ನುಗ್ಗಿರುವ ಕಳ್ಳರು ಕೊಟ್ರಪ್ಪ ಅವರ ಕೊಠಡಿಯಲ್ಲಿದ್ದ ಬೀರುವಿನಿಂದ 43,800 ರೂ. ನಗದು, ಮಗನ ಬೆಡ್ ರೂಂನಲ್ಲಿರುವ ಬೀರುವಿನಿಂದ 4 ವಾಚ್, 2 ಜರ್ಕಿನ್, ಶೋಕೇಸ್‌ನಲ್ಲಿದ್ದ 3 ವಾಚ್, ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ರಾಯಲ್ ಎನ್ ಫೀಲ್ಡ್ ಬೈಕನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.
ಪಕ್ಕದ ಮನೆಯಲ್ಲಿರುವ ಸಹೋದರ ಬೆಳಗ್ಗೆ ರೈಲಿಗೆ ತೆರಳಲು ಮನೆಯಿಂದ ಹೊರ ಬಂದಾಗ ಕೊಟ್ರಪ್ಪ ಅವರ ಮನೆಯ ಗೇಟ್ ತೆಗೆದಿತ್ತು. ಕಾಂಪೌಂಡ್ ಒಳಗಿರುವ ಬೈಕ್ ನಾಪತ್ತೆಯಾಗಿತ್ತು. ಕೂಡಲೆ ಕಟ್ರಪ್ಪ ಅವರಿಗೆ ಕರೆ ಮಾಡಿದ್ದರು. ಕೊಟ್ರಪ್ಪ ಅವರ ಮನೆಯ ಮುಂಬಾಗಿಲು ಹೊರಗಿನಿಂದ ಚಿಲಕ ಹಾಕಲಾಗಿತ್ತು. ಹಾಗಾಗಿ ಹಿಂಬದಿ ಬಾಗಿಲಿನಿಂದ ಹೊರ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ.
ಕಳ್ಳರು ಕಿಟಕಿಯಿಂದ ಒಳಗೆ ಕೈ ಹಾಕಿ ಬಾಗಿಲಿನ ಚಿಲಕ ತೆಗೆದು ಕಳ್ಳತನ ಮಾಡಿದ್ದಾರೆ ಎಂದು ಕೊಟ್ರಪ್ಪ ಆರೋಪಿಸಿ ದೂರು ನೀಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


