ನವದೆಹಲಿ: ಭಾರತದಲ್ಲಿ ಸಮಾನತೆಯನ್ನು ಹೋಗಲಾಡಿಸಿ, ಸಂವಿಧಾನವನ್ನು ನಾಶಪಡಿಸುವುದೇ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಮುಖ್ಯ ಉದ್ದೇಶವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿ ಏಪ್ರಿಲ್ 14ರಂದು ನಡೆಯಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ‘ಅಂಬೇಡ್ಕರ್ ಹಾದಿಯಲ್ಲಿ ನಡಿಗೆ, ಸಂವಿಧಾನಕ್ಕಾಗಿ ನಡಿಗೆ’ ಎಂಬ ಮ್ಯಾರಥಾನ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂವಿಧಾನವು ಭಾರತದ ಅಡಿಪಾಯವಾಗಿದೆ. ಸಂವಿಧಾನವಿಲ್ಲದಿದ್ದರೆ ಇಂದು ನಾವು ಭಾರತ ಎಂದು ಕರೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಮನಸ್ಥಿತಿಯ ಜನರು ಇದನ್ನು ಅಳಿಸಿಹಾಕಲು ಸಂಚು ರೂಪಿಸುತ್ತಿದ್ದಾರೆ ಎಂದು ರಾಹುಲ್ ಹೇಳಿದರು.
ಭಾರತದ ಪ್ರತಿಯೊಬ್ಬ ಪ್ರಜೆ ಸಮಾನವಾಗಿ ಬದುಕುವುದು ಬಿಜೆಪಿಗೆ ಇಷ್ಟವಿಲ್ಲ. ಅವರ ಒಳಸಂಚು ಸಂವಿಧಾನವನ್ನು ನಾಶಪಡಿಸುವುದೇ ಆಗಿದೆ. ಅವರು ಅಂಬೇಡ್ಕರ್ ಪ್ರತಿಮೆ ಮುಂದೆ ತಲೆಬಾಗಿದರೂ, ಅವರ ಮನಸ್ಸಿನಲ್ಲಿ ಸಂವಿಧಾನದ ವಿರೋಧಿ ನೀತಿಗಳಿವೆ ಎಂದು ಟೀಕಿಸಿದರು.
ಸಂವಿಧಾನವನ್ನು ರಕ್ಷಿಸುವುದು ಮತ್ತು ಬಲಪಡಿಸುವುದು ನಮ್ಮ ಗುರಿಯಾಗಿದೆ. ಸಾಂವಿಧಾನಿಕ ಮೌಲ್ಯಗಳ ಮೇಲೆ ದಾಳಿ ನಡೆಯುತ್ತಿರುವ ಈ ಸಮಯದಲ್ಲಿ, ಅನ್ಯಾಯ ಮತ್ತು ತಾರತಮ್ಯದ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಎಂದು ಅವರು ಕರೆ ನೀಡಿದರು.
ಈ ಕುರಿತು ತಮ್ಮ ಫೇಸ್ ಬುಕ್ ಪುಟದಲ್ಲೂ ಬರೆದುಕೊಂಡಿರುವ ರಾಹುಲ್ ಗಾಂಧಿ, ಅಂಬೇಡ್ಕರ್ ಅವರ ಸಂಕಲ್ಪದೊಂದಿಗೆ ಸಂವಿಧಾನ ರಕ್ಷಣೆಗಾಗಿ ನಿಲ್ಲುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


