ನವದೆಹಲಿ: ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ನಡೆಯುವ ಪ್ರಯುಕ್ತ ‘ಶ್ರೀ ರಾಮ್, ಜೈ ರಾಮ್, ಜೈ ಜೈ ರಾಮ್’ ಎಂಬ ಮಂತ್ರ ಪಠಿಸುಂತೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಸ್ಲಿಂ ರಾಷ್ಟ್ರೀಯ ಮಂಚ್ ಮುಖ್ಯ ಪೋಷಕ ಮತ್ತು ಆರ್ ಎಸ್ ಎಸ್ ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಇಂದ್ರೇಶ್ ಕುಮಾರ್ ಅವರು ಮುಸ್ಲಿಮರು ಮತ್ತು ಇತರರಿಗೆ ಕರೆ ನೀಡಿದ್ದಾರೆ. ದರ್ಗಾಗಳು, ಮಕ್ತಬ್ ಗಳು, ಮದರಸಾಗಳು ಮತ್ತು ಮಸೀದಿಗಳಲ್ಲಿ ‘ಶ್ರೀ ರಾಮ್, ಜೈ ರಾಮ್, ಜೈ ಜೈ ರಾಮ್’ ಪಠಣ ಮಾಡಬೇಕು ಎಂಬುದಾಗಿ ಎಂಆರ್ ಎಂ ಮನವಿ ಮಾಡಿದೆ. ಅದನ್ನೇ ಪುನರುಚ್ಚರಿಸುತ್ತೇನೆ ಎಂದು ಇಂದ್ರೇಶ್ ಕುಮಾರ್ ಹೇಳಿದ್ದಾರೆ.
ದೇಶದ ವೈವಿಧ್ಯಮಯ ಧಾರ್ಮಿಕ ಸಮುದಾಯಗಳ ಪರಂಪರೆ ಮತ್ತು ವಂಶಾವಳಿಯನ್ನು ಪ್ರಸ್ತಾಪಿಸಿದ ಅವರು, ಸುಮಾರು ಶೇ 99 ರಷ್ಟು ಮುಸ್ಲಿಮರು ಮತ್ತು ಇತರ ಹಿಂದೂಯೇತರರು ಭಾರತದ ಭಾಗವಾಗಿದ್ದಾರೆ ಎಂದು ಹೇಳಿದ್ದಾರೆ.
“ರಾಮ ಮಂದಿರ್, ರಾಷ್ಟ್ರ ಮಂದಿರ್ – ಎ ಕಾಮನ್ ಹೆರಿಟೇಜ್” ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕುಮಾರ್, ಮನೆತನ, ಧಾರ್ಮಿಕ ನಂಬಿಕೆ ಇತ್ಯಾದಿ ವ್ಯತ್ಯಾಸಗಳ ಹೊರತಾಗಿಯೂ ದೇಶದ ಮುಸ್ಲಿಮರು ಹಾಗೂ ಇತರ ಹಿಂದೂಯೇತರರು ಭಾರತದ ಅವಿಭಾಜ್ಯ ಅಂಗವೇ ಆಗಿದ್ದಾರೆ ಎಂದಿದ್ದಾರೆ. ಜತೆಗೆ, ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವದ ಸಾಮೂಹಿಕ ಅಭಿವ್ಯಕ್ತಿಗೆ ಕರೆ ನೀಡಿದ್ದಾರೆ.


