ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ ಶ್ರೀನಿವಾಸ್ ಕೆ. ತಹಶೀಲ್ದಾರ್ ಸಿದ್ದೇಶ್, ಜಂಟಿ ನಿರ್ದೇಶಕ ಕೃಷ್ಣಪ್ಪ ಸೇರಿದಂತೆ ಇತರ ಅಧಿಕಾರಿಗಳು ದೀಪಾವಳಿ ನೆಪದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಮಹಿಳಾ ಹಾಸ್ಟೆಲ್ ಗೆ ನಿಯಮ ಬಾಹಿರವಾಗಿ ಅತಿಕ್ರಮ ಪ್ರವೇಶಿಸಿ ವಿದ್ಯಾರ್ಥಿನಿಯರ ಮೈ ಕೈ ಮುಟ್ಟುವುದರ ಮೂಲಕ ಅಸಹ್ಯ ಸಾಹಿತ್ಯದ ಸಿನಿಮಾ ಹಾಡುಗಳು ಅಸಭ್ಯವಾಗಿ ನೃತ್ಯ ಮಾಡಿರುವ ಬಗ್ಗೆ ಪೊಲೀಸ್ ಉಪನಿರೀಕ್ಷಕರಿಗೆ ಸಾಮಾಜಿಕ ಹೋರಾಟಗಾರ ಹಂದ್ರಾಳ್ ನಾಗಭೂಷಣ್ ಅವರು ದೂರು ನೀಡಿದ್ದಾರೆ.
ಜಿಲ್ಲಾಧಿಕಾರಿ ಶ್ರೀನಿವಾಸ್ ಕೆ., ತಹಶೀಲ್ದಾರ್ ಸಿದ್ದೇಶ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಸೇರಿದಂತೆ ಜಿಲ್ಲೆಯ ಇತರ ಅಧಿಕಾರಿಗಳು ದೀಪಾವಳಿ ಹಬ್ಬದ ನೆಪದಲ್ಲಿ ರಾತ್ರಿ ವೇಳೆ ಸರ್ಕಾರದ ವ್ಯಾಪ್ತಿಗೆ ಒಳಪಡುವ ತುಮಕೂರು ನಗರದ ಗೆದ್ದಲಹಳ್ಳಿ ರಸ್ತೆಯಲ್ಲಿರುವ ಪರಿಶಿಷ್ಟ ಜಾರಿ, ಪರಿಶಿಷ್ಟ ವರ್ಗಗಳ ಅಪ್ರಾಪ್ತ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ತೆರಳಿ ಇಲ್ಲಿನ ವಿದ್ಯಾರ್ಥಿನಿಯರೊಂದಿಗೆ ಮೈಕೈ ಮುಟ್ಟಿ, ಕೈಕೈ ಹಿಡಿದು ಅಶ್ಲೀಲವಾದ ಹಾಡುಗಳಿಗೆ ಡಾನ್ಸ್ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಹೆಣ್ಣು ಮಕ್ಕಳ ಹಾಸ್ಟೆಲ್ ಗೆ ರಾತ್ರಿ ವೇಳೆ ಪುರುಷರು ತೆರಳಬಾರದು ಎಂಬ ನಿಯಮ ಇದ್ದರೂ ಕೂಡ ಸದರಿ ಅಧಿಕಾರಿಗಳು ತೆರಳಿರುವುದು ಸರ್ಕಾರಿ ಹಾಸ್ಟೆಲ್ ಗೆ ಅತಿಕ್ರಮ ಪ್ರವೇಶ ಮಾಡಿದಂತಾಗಿದೆ. ಮತ್ತು ಹೆಣ್ಣು ಮಕ್ಕಳನ್ನು ಮುಟ್ಟಿ ಅಸಭ್ಯವಾಗಿ ನಡೆದುಕೊಳ್ಳುವುದು ಅಕ್ಷಮ್ಯ ಅಪರಾಧವಾಗಿದೆ. ಪರಿಶಿಷ್ಟ ಜಾತಿ, ಪಂಗಡದ ಹೆಣ್ಣು ಮಕ್ಕಳನ್ನು ಮೋಜು ಮಸ್ತಿಗೆ ಅಧಿಕಾರಿಗಳು ಬಳಸಿಕೊಂಡಿರುವುದು ಪರಿಶಿಷ್ಟ ಜಾತಿ, ಪಂಗಡಗಳ ಕಾಯ್ದೆಯನ್ನು ನೇರವಾಗಿ ಉಲ್ಲಂಘಿಸಿದಂತಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಾಸ್ಟೆಲ್ ನಲ್ಲಿ ತಂಗಿರುವ ವಿದ್ಯಾರ್ಥಿನಿಯರು ಬಡತನದಿಂದ ಕೂಡಿದ್ದು, ಅಸ್ಪೃಶ್ಯತೆಯಿಂದ ನೊಂದಿರುತ್ತಾರೆ. ಮಕ್ಕಳಿಗೆ ಸರ್ಕಾರಿ ಸೇವೆಗಳನ್ನು ನೀಡಬೇಕಾದ ಅಧಿಕಾರಿಗಳು, ಸೌಲಭ್ಯ ನೀಡುವ ನೆಪದಲ್ಲಿ ಹೀನ ಕೃತ್ಯಗಳಿಗೆ ಬಳಸಿಕೊಂಡಿರುವುದು ವಿಷಾಧನೀಯ, ಅಕ್ಷಮ್ಯ ಅಪರಾಧವಾಗಿದೆ. ಆದ್ದರಿಂದ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿ ಶ್ರೀನಿವಾಸ್ ಕೆ. ತಹಶೀಲ್ದಾರ್ ಸಿದ್ದೇಶ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಇವರ ವಿರುದ್ಧ ಎಫ್ ಐಆರ್ ದಾಖಲಿಸಿ, ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಹಂದ್ರಾಳ್ ನಾಗಭೂಷಣ್ ಒತ್ತಾಯಿಸಿದ್ದಾರೆ.
ಇನ್ನೂ ಅಧಿಕಾರಿಗಳ ವಿರುದ್ಧ ದೂರು ನೀಡುತ್ತಿದ್ದಂತೆಯೇ ಹಂದ್ರಾಳ್ ನಾಗಭೂಷಣ್ ಅವರ ಮೇಲೆ ನಾನಾ ರೀತಿಯ ಒತ್ತಡಗಳನ್ನು ಹಾಕುವ ಪ್ರಯತ್ನಗಳು ನಡೆದಿದ್ದು, ಈ ಬಗ್ಗೆ ಎಸ್ ಪಿಗೂ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.


