ಕೊರಟಗೆರೆ: ನಮ್ಮ ದೇಶದ ನಿಜವಾದ ಶಕ್ತಿ ಗ್ರಾಮಗಳಲ್ಲಿ ಅಡಗಿದೆ. ಗ್ರಾಮೀಣ ಜನರು ಜಾತಿ–ಮತ ಭೇದ ಮರೆತು ಒಗ್ಗಟ್ಟಾಗಿ ಬದುಕಿದಾಗ ಮಾತ್ರ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಇಂತಹ ಏಕತೆಯನ್ನು ಬೆಳೆಸುವಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಡಾ.ಹನುಮಂತನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಕೋಳಾಲ ಹೋಬಳಿಯ ಪಾತಗಾನಹಳ್ಳಿ ಗ್ರಾಮದಲ್ಲಿ ಸೋಮವಾರ ನೂತನವಾಗಿ ನಿರ್ಮಿಸಲಾದ ಶ್ರೀ ಚನ್ನಕೇಶ್ವರ ಸ್ವಾಮಿ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದ ಅವರು, ಗ್ರಾಮೀಣ ಜೀವನದ ಮೌಲ್ಯ, ಪರಸ್ಪರ ಸಹಕಾರ ಹಾಗೂ ಸಾಮಾಜಿಕ ಸಾಮರಸ್ಯದ ಅಗತ್ಯತೆಯನ್ನು ಬಗ್ಗೆ ತಿಳಿಸಿದರು.
ಗ್ರಾಮಗಳಲ್ಲಿ ಇರುವ ಸೌಹಾರ್ದತೆಯೇ ದೇಶದ ಬಲ, ಧಾರ್ಮಿಕ ಕೇಂದ್ರಗಳು ಕೇವಲ ಪೂಜೆಯ ಸ್ಥಳಗಳಲ್ಲ, ಸಮಾಜವನ್ನು ಒಂದಾಗಿ ಕಟ್ಟುವ ಕೇಂದ್ರಗಳಾಗಬೇಕು. ಯುವಕರು ದುಶ್ಚಟಗಳಿಗೆ ಒಳಗಾಗದೆ ಸಂಸ್ಕೃತಿ, ಶಿಸ್ತು ಹಾಗೂ ಸೇವಾ ಮನೋಭಾವವನ್ನು ಅಳವಡಿಸಿ ಕೊಳ್ಳಬೇಕು ಎಂದು ಸ್ವಾಮೀಜಿ ಉಪದೇಶ ನೀಡಿದರು.
ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿಯ ಸದಸ್ಯರಾದ ವಿರೂಪಾಕ್ಷಯ್ಯ, ವಿಶ್ವೇಶ್ವರಪ್ಪ, ರಾಮಣ್ಣ, ಕದಿರಪ್ಪ, ನಂಜುಂಡಪ್ಪ, ಸತೀಶ್ ಸೇರಿದಂತೆ ನೂರಾರು ಗ್ರಾಮಸ್ಥರು ಭಕ್ತಿಭಾವದಿಂದ ಭಾಗವಹಿಸಿದ್ದರು.
ಉದ್ಘಾಟನಾ ಕಾರ್ಯಕ್ರಮವು ವೈದಿಕ ವಿಧಿವಿಧಾನಗಳು, ಪೂಜೆ–ಪುನಸ್ಕಾರಗಳೊಂದಿಗೆ ಸಂಭ್ರಮದಿಂದ ನೆರವೇರಿತು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


