ಬೆಂಗಳೂರು: ಸಿದ್ದಲಿಂಗಯ್ಯ ಅವರು ಯಾವುದೇ ವಿಚಾರ ಇದ್ದರೂ ಅಧ್ಯಯನ ಮಾಡಿ ವಿಧಾನ ಪರಿಷತ್ ಸದನಕ್ಕೆ ಬರುತ್ತಿದ್ದರು. ಅಲ್ಲಿ ಪ್ರಶ್ನೆ ಮಾಡುತ್ತಿದ್ದರು. ಸದನದ ಗೌರವ ಹೆಚ್ಚಿಸಿದ್ದರು ಎಂದು ಕಾಂಗ್ರೆಸ್ ನಾಯಕ ವಿ.ಆರ್.ಸುದರ್ಶನ್ ನೆನಪು ಮಾಡಿಕೊಂಡರು.
ಸಿದ್ಧಲಿಂಗಯ್ಯ ಸ್ಮಾರಕ ಪ್ರತಿಷ್ಠಾನ, ಬಾಬು ಜಗಜೀವನ ರಾಂ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಸಿದ್ದಲಿಂಗಯ್ಯ ಅವರ ಅಭಿಮಾನಿ ಬಳಗವು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಿದ್ದಲಿಂಗಯ್ಯ ಪರಿನಿಬ್ಬಾಣ ಎರಡನೇ ವರ್ಷದ ಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎ.ಕೆ.ಸುಬ್ಬಯ್ಯ, ಎಂ.ಸಿ.ನಾಣಯ್ಯ, ಎಚ್.ನರಸಿಂಹಯ್ಯಅವರಂತೆ ಸಿದ್ದಲಿಂಗಯ್ಯ ಅವರಿಂದಲೂ ಸದನಕ್ಕೆ ಮಹತ್ವ ಬಂತು. ಶಿಕ್ಷಕರ ಸಮಸ್ಯೆಗಿಂತ ಶಿಕ್ಷಣದ ಸಮಸ್ಯೆ ಬಗ್ಗೆ ಧ್ವನಿ ಎತ್ತುತ್ತಿದ್ದರು. ಜನರ ಒಡನಾಟ ಇದ್ದ ಅವರು ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದರು ಎಂದು ಹೇಳಿದರು. ಭಾವನೆಗಳನ್ನು ಕೆರಳಿಸುವುದು ಸುಲಭ. ಇದರಿಂದ ಸಂಘರ್ಷಗಳಾಗಬಹುದೇ ಹೊರತು ಜನರ ಬದುಕಿಗೆ ಉಪಯೋಗ ಆಗುವುದಿಲ್ಲ. ಸಿದ್ದಲಿಂಗಯ್ಯ ಅವರು ಜನಸಾಮಾನ್ಯರ ಬದುಕಿಗಾಗಿ ಹೋರಾಟ ಮಾಡಿದವರು ಎಂದು ಹೇಳಿದರು. ಸಿದ್ಧಲಿಂಗಯ್ಯಅವರ ಅವತಾರಗಳು ಕೃತಿಯನ್ನು ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕಿ ಮಂಗಳಾ ಕುಮಾರಿ ಬಿ.ಎಸ್.ಅವರು ಇಂಗ್ಲಿಷ್‌ಗೆ ಅನುವಾದಿಸಿದ್ದ ಅವತಾರಸ್ ಕೃತಿಯನ್ನು ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಬಿಡುಗಡೆ ಮಾಡಿದರು.
‘ರಾಜ್ಯದಲ್ಲಿ 30 ಸಾವಿರ ಹಳ್ಳಿಗಳಿವೆ. ಕನಿಷ್ಠ 30 ಸಾವಿರ ಗ್ರಾಮ ದೇವತೆಗಳಿವೆ. ಒಂದಕ್ಕೊಂದು ವಿಶಿಷ್ಠವಾದುದು. ಯಾವ ದೇವರನ್ನೂ ಗ್ರಾಮ ದೇವತೆಯನ್ನೂ ಗೇಲಿ ಮಾಡದೇ ಅದನ್ನು ನಂಬುವ ಭಕ್ತರು ಸರಿಯಾದ ರೀತಿಯಲ್ಲಿ ಪೂಜಿಸಲಿ ಎಂಬ ಕಾರಣಕ್ಕೆ ಅವತಾರಗಳು’ ಕೃತಿ ರಚಿಸಿದರು. ಇದು ಈಗಾಗಲೇ 6ನೇ ಮುದ್ರಣ ಕಂಡಿದೆ. ಆದರೆ ಬೇರೆ ಭಾಷೆಗಳಿಗೆ ಹೋಗಿರಲಿಲ್ಲ. ಈಗ ಇಂಗ್ಲಿಷ್‌ಗೆ ಅನುವಾದವಾಗಿರುವುದು ಉತ್ತಮ ಬೆಳವಣಿಗೆ ಬೇರೆ ಬೇರೆ ಭಾಷೆಗಳಿಗೆ ಹೋಗಬೇಕು’ ಎಂದು ಕಪ್ಪಣ್ಣ ಆಶಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


