ನವದೆಹಲಿ: ಪಶ್ಚಿಮ ನ್ಯೂಯಾರ್ಕ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಲೇಖಕ ಸಲ್ಮಾನ್ ರಶ್ದಿಗೆ ಅಪರಿಚಿತ ವ್ಯಕ್ತಿಯೊಬ್ಬ ಚಾಕು ಇರಿದು ಹಲ್ಲೆ ನಡೆಸಿದ್ದಾನೆ. ಷಟೌಕ್ವಾ ಇನ್‌ಸ್ಟಿಟ್ಯೂಟ್ ನ ವೇದಿಕೆಯ ಮೇಲೆ ಆಯೋಜಕರು ರಶ್ದಿ ಅವರನ್ನು ಭಾಷಣಕ್ಕೆ ಆಹ್ವಾನಿಸುತ್ತಿದ್ದಂತೆಯೇ ದಿಢೀರ್ ದಾಳಿ ನಡೆಸಿದ ಅಪರಿಚಿತ ವ್ಯಕ್ತಿ ರಶ್ದಿ ಅವರಿಗೆ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಅವರು ನೆಲಕ್ಕೆ ಕುಸಿದುಬಿದ್ದಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ವೆಂಟಿಲೇಟರ್‌ನಲ್ಲಿ ಸಲ್ಮಾನ್ ರಶ್ದಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ದಾಳಿಯ ಪರಿಣಾಮ ಅವರು ತಮ್ಮ ಒಂದು ಕಣ್ಣನ್ನು ಕಳೆದುಕೊಳ್ಳೂವ ಸಾಧ‍್ಯತೆ ಇದೆ ಎಂದು ತಿಳಿದುಬಂದಿದೆ. ಚಾಕು ಇರಿತದಿಂದ ರಶ್ದಿಯವರ ತೋಳಿನ ನರಗಳು ತುಂಡಾಗಿದ್ದು, ಯಕೃತ್ತಿಗೆ ಹಾನಿಯುಂಟಾಗಿದೆ. ತಜ್ಞ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ.
ಬಫಲೋದಿಂದ ದಕ್ಷಿಣಕ್ಕೆ 75 ಮೈಲುಗಳಷ್ಟು ದೂರದಲ್ಲಿರುವ ಷಟೌಕ್ವಾದಲ್ಲಿ ಈ ಘಟನೆ ನಡೆದಿದೆ. ಇನ್ಸ್ಟಿಟ್ಯೂಟ್ ಪ್ರಕಾರ ‘ಅಭಿವ್ಯಕ್ತಿ ಸ್ವಾತಂತ್ರ್ಯದ ನೆಲೆಯಾಗಿ’ ದೇಶಭ್ರಷ್ಟ ಲೇಖಕರಿಗೆ ಅಮೆರಿಕ’ ವಿಷಯದ ಬಗ್ಗೆ ರಶ್ದಿ ಮಾತನಾಡಬೇಕಿತ್ತು. ಚಾಕು ಇರಿತದ ನಂತರ ಅವರನ್ನು ಹೆಲಿಕಾಪ್ಟರ್ ಮೂಲಕ ಪೆನ್ಸಿಲ್ವೇನಿಯಾದ ಎರಿಯಲ್ಲಿರುವ ಆಸ್ಪತ್ರೆಗೆ ಸಾಗಿಸಲಾಯಿತು.
ದಾಳಿ ವೇಳೆ ರಶ್ದಿಯವರು ವೇದಿಕೆಯಿಂದ ಓಡಿಹೋಗಲು ಪ್ರಯತ್ನಿಸಿದರು. ದಾಳಿಕೋರನನ್ನು ಹಿಡಿಯಲು ಕೆಲವರು ವೇದಿಕೆಯ ಮೇಲೆ ಧಾವಿಸಲು ಪ್ರಯತ್ನಿಸಿದರು. ಆದರೂ ದಾಳಿಕೋರ ರಶ್ದಿಯವರಿಗೆ ಹರಿತ ಚಾಕುವಿನಿಂದ ಇರಿದಿದ್ದಾನೆ. ದಾಳಿ ನಂತರ ನ್ಯೂಜೆರ್ಸಿ ಮೂಲದ 24 ವರ್ಷದ ಹದಿ ಮಾತರ್ ಎಂಬಾತನನ್ನು ನ್ಯೂಯಾರ್ಕ್ ರಾಜ್ಯ ಪೊಲೀಸರು ಬಂಧಿಸಿದ್ದಾರೆ.
ಸಲ್ಮಾನ್ ರಶ್ದಿಯವರ ‘ದ ಸಟಾನಿಕ್ ವರ್ಸೆಸ್’ ಕೃತಿಯು 1988ರಲ್ಲಿ ಇರಾನ್‌ನಲ್ಲಿ ನಿಷೇಧಕ್ಕೊಳಗಾಗಿದೆ. ಹಲವು ಮುಸ್ಲಿಮರು ಈ ಕೃತಿಯಲ್ಲಿ ಧರ್ಮನಿಂದನೆಯ ಅಂಶಗಳಿವೆ ಎಂದು ಆರೋಪಿಸಿದ್ದರು. ರಶ್ದಿ ಅವರ ಹತ್ಯೆಗೆ ಆಗ ಫತ್ವಾ ಸಹ ಹೊರಡಿಸಲಾಗಿತ್ತು.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy