ಬಾಗಲಕೋಟೆ: ಪ್ರಜೆಗಳ ಹಿತಾಸಕ್ತಿ ಕಾಪಾಡುವಲ್ಲಿ ಮತ್ತು ಸಾಮಾಜಿಕ ಕೊಡುಗೆ ನೀಡುವಲ್ಲಿ ವೀರಶೈವ ರಾಜಮನೆತನಗಳ ಕೊಡುಗೆ ಅಪಾರವಾದದ್ದು. ಇದರಲ್ಲಿ ಹಂಡೆ ಅರಸು ಮನೆತನವು ಮೊದಲ ಸಾಲಿನಲ್ಲಿದೆ ಎಂದು ಶಾಸಕು ಹಾಗೂ ಬಿವಿವಿ ಸಂಘದ ಕಾರ್ಯಾಧ್ಯಕ್ಷರಾದ ಡಾ. ವೀರಣ್ಣ ಚರಂತಿಮಠ ಹೇಳಿದರು.
ಬಸವೇಶ್ವರ ಶಾಲಾ ಮಹಾವಿದ್ಯಾಲಯದ ಸಭಾಭವನದಲ್ಲಿ ಕನ್ನಡ ಸ್ನಾತಕೋತ್ತರ ವಿಭಾಗ, ಬಿವಿವಿಎಸ್ ಸಂಶೋಧನಾ ಕೇಂದ್ರ ಹಾಗೂ ಕಲಬುರ್ಗಿ ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡ ಹಂಡೆ ಅರಸರ ಸಾಂಸ್ಕೃತಿಕ ಕೊಡುಗೆಗಳು ರಾಜ್ಯಮಟ್ಟದ ವಿಚಾರ ಸಂಕಿರಣ ಮತ್ತು ಗ್ರಂಥಗಳ ಬಿಡುಗಡೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಇತರ ಧರ್ಮಿಯ ರಾಜರಂತೆ ದಬ್ಬಾಳಿಕೆ ಮತ್ತು ಹಿಂಸೆಗಳನ್ನು ಪ್ರೋತ್ಸಾಹಿಸಿದೆ ಧಾರ್ಮಿಕ ನೆಲಗಟ್ಟಿನ ಮೇಲೆ ಆದರ್ಶ ಆಡಳಿತ ನೀಡಿರುವುದು ವೀರಶೈವ ರಾಜಮನೆತನಗಳು. ಇದಕ್ಕೆ ಮೈಸೂರು ಮತ್ತು ಸುರಪೂರ ರಾಜಾಡಳಿತವೆ ಸಾಕ್ಷಿಯಾಗಿದೆ ಎಂದರು.
ಹಂಡೆ ಅರಸರ ಕೊಡುಗೆ ಅಪಾರವಾಗಿದ್ದು ಅವುಗಳನ್ನು ತಿಳಿದುಕೊಳ್ಳುವುದ ಅವಶ್ಯಕವಾಗಿದೆ. ಕರ್ನಾಟಕ ಇತಿಹಾಸದಲ್ಲಿ ತಮ್ಮದೆಯಾದ ಕೊಡುಗೆಕೊಟ್ಟ ಅರಸು ಮನೆತನಗಳ ಮೇಲೆ ಪ್ರಜೆಗಳು ಸರಕಾರಕ್ಕಿಂತ ಹೆಚ್ಚು ಅವಲಂಭಿತರಾಗಿದ್ದರು ಅದಕ್ಕೆ ಅವರ ತ್ಯಾಗ, ಶೌರ್ಯ, ಧೈರ್ಯ ಮತ್ತು ಸಮರ್ಪಕ ಆಡಳಿತವೆ ಕಾರಣ ಎಂದರು.
ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠದ ಅಧ್ಯಕ್ಷರಾದ ಜಿ.ಎನ್.ಪಾಟೀಲ್ ಮಾತನಾಡಿ ಹಂಡೆ ಅರಸರ ಆಡಳಿತ ಅತಿದೊಡ್ಡ ಇತಿಹಾಸ ಹೊಂದಿದ್ದು ಕರ್ನಾಟಕಕ್ಕೆ ತಮ್ಮದೆಯಾದ ಸಾಲು ಸಾಲು ಕೊಡುಗೆ ನೀಡಿದ ಅವರ ಅಧ್ಯಯನ ಅವಶ್ಯವಾಗಿದೆ. ಇತಿಹಾಸವನ್ನು ಕಟ್ಟಲು ಶಾಸನ, ಕೈಪಿಯತ್ತುಗಳು ಮತ್ತು ಸಾಹಿತ್ಯ ಕೃತಿಗಳು ಪ್ರಮುಖವಾಗಿದ್ದು ಇಂದು ಲೋಕಾರ್ಪಣೆಯಾದ ಕೈಪಿಯತ್ತುಗಳು ಹಂಡೆ ಅರಸರ ಸಮರ್ಪಕ ಇತಿಹಾಸವನ್ನು ಒದಗಿಸುತ್ತವೆ ಎಂದರು.
ಸಾಂಸ್ಕೃತಿಕವಾಗಿ ಅಷ್ಟೇ ಅಲ್ಲದೆ ಧಾರ್ಮಿಕ, ಸಾಹಿತ್ಯ ಲೋಕದಲ್ಲಿಯೂ ಅಪಾರ ಕೊಡುಗೆ ನೀಡಿದ ಹಂಡೆ ಅರಸು ಮನೆತನಗಳ ಬಗ್ಗೆ ಅನ್ಯರಾಜ್ಯಗಳಲ್ಲಿ ಅಧ್ಯಯನ ಮಾಡಲಾಗುತ್ತಿದ್ದು ಹಲವಾರು ಭಾಷೆಗಳಲ್ಲಿ ಗ್ರಂಥಗಳನ್ನು ಬರೆಯಲಾಗಿದೆ. ವೀರಶೈವ ಧರ್ಮವನ್ನು ವೃತದಂತೆ ಕಾಪಾಡಿಕೊಂಡು ಬಂದಿದ್ದಾರೆ ಎಂದು ರವೀಂದ್ರನಾಥರು ಹೇಳುವುದನ್ನು ಗಮನಿಸಿದರೆ ಅವರ ಧರ್ಮಪಾಲನೆಯ ಶ್ರೇಷ್ಠತೆ ಕಾಣುತ್ತದೆ ಎಂದರು.
ಹಂಡೆ ಅರಸು ಮನೆತನಕ್ಕೆ ಸಂಬಂಧಿಸಿದಂತೆ ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠದಿಂದ 25 ಕೃತಿಗಳನ್ನು ಹೊರ ತಂದಿದ್ದೆವೆ. ಹಂಡೆ ಆಡಳಿತದ ಅಧ್ಯಯನಕ್ಕಾಗಿ ವಿವಿ ಮಟ್ಟದಲ್ಲಿ ಸಂಶೋಧನ ಪೀಠ ಪ್ರಾರಂಭವಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಾಚಾರ್ಯರ ಡಾ. ವಿ.ಎಸ್ ಕಟಗಿಹಳ್ಳಿಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿ ಅಧ್ಯಕ್ಷರಾದ ಗುರುಬಸವ ಸೂಳಿಭಾವಿ, ವಿಶ್ರಾಂತ ಪ್ರದ್ಯಾಪಕರಾದ ಡಾ. ರು.ಮ ಷಡಕ್ಷರಯ್ಯ, ಕರ್ನಾಟಕ ಲಲಿತಕಲಾ ವಿವಿ ವಿಶ್ರಾಂತ ವಿಶೇಷಾಧಿಕಾರಿ ಡಾ.ಎಸ್.ಸಿ ಪಾಟೀಲ್, ಡಾ.ಡಿ.ಎನ್ ಪಾಟೀಲ, ನೇತಿ ರಘುರಾಮ, ಡಾ. ಕೊಟ್ರಸ್ವಾಮಿ ಎ.ಎಂ.ಎಂ, ಡಾ.ಬಿ.ವ್ಹಿ ಖೋತ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕೈಪಿಯತ್ತುಗಳ ಲೋಕಾರ್ಪಣೆ: ಹಂಡೆ ಅರಸರ ಆಡಳಿತ ಮತ್ತು ಇತಿಹಾಸದ ಕುರಿತು ಬರೆಯಲಾದ ಕೈಪಿಯತ್ತುಗಳನ್ನು ಲೋಕಾರ್ಪಣೆ ಮಾಡಲಾಯಿತು. ಬಳ್ಳಾರಿಯ ನೇತೃತ್ವದಲ್ಲಿ ರಘುರಾಮರ ಬುಕ್ಕರಾಯಸಮುದ್ರ ಅನಂತಸಾಗರ ಕೈಫಿಯತ್ತು ಮತ್ತು ಅನಂತಪುರ ಜಿಲ್ಲೆಯ ಐತಿಹಾಸಿಕ ಕಥೆಗಳು ಎಂಬ ಗ್ರಂಥಗಳನ್ನು ಹಾಗೂ ಡಾ. ಕೊಟ್ರಸ್ವಾಮಿ.ಎ.ಎಂ.ಎಂ ಅವರು ಬರೆದ ಅನಂತಪುರ ಕೈಪಿಯತ್ತುಗಳನ್ನು ಲೋಕಾರ್ಪಣೆ ಮಾಡಲಾಯಿತು. ಡಾ.ಡಿ.ಎನ್ ಪಾಟೀಲ್ ಕೃತಿಗಳ ಪರಿಚಯ ಮಾಡಿದರು.
ಹಂಡೆ ಅರಸರ ಕೊಡುಗೆ ಕುರಿತು ಗೋಷ್ಟಿ: ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹಂಡೆ ಅರಸರ ಕೊಡುಗೆ ಮತ್ತು ಆಡಳಿತದ ಕುರಿತು ಗೋಷ್ಟಿ ನಡೆಸಲಾಯಿತು. ಗೋಷ್ಟಿಯಲ್ಲಿ ಹಂಡೆ ಅರಸರ ಧಾರ್ಮಿಕ ಕೊಡುಗೆಗಳು ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಕೆ.ರವೀಂದ್ರನಾಥ ಉಪನ್ಯಾಸ ನೀಡಿದರು. ಬೆಂಗಳೂರಿನ ಸಂಶೋಧಕರಾದ ಡಾ.ಸುಂಕಂ.ಗೋವರ್ಧನ್ ಅವರು ಶಾಸನಗಳಲ್ಲಿ ಹಂಡೆ ಅರಸರು ಎಂಬ ವಿಷಯದ ಬಗ್ಗೆ ಮತ್ತು ಧಾರವಾಡದ ಕರ್ನಾಟಕ ವಿವಿಯ ಕನ್ನಡ ಸಂಶೋಧನ ಸಂಸ್ಥೆಯ ನಿರ್ದೇಶಕರಾದ ಪ್ರೋ.ಎಸ್.ಕೆ.ಮೇಲಕಾರ ಅವರು ಹಂಡೆ ಅರಸರ ಸಾಮಾಜಿಕ ಕೊಡುಗೆಗಳು ವಿಷಯದ ಕುರಿತು ಉಪನ್ಯಾಸ ಮಂಡಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


