ನಾಯಕನಹಟ್ಟಿ: ಸಂವಿಧಾನ ಹಾಗೂ ಸಂಸ್ಕೃತಿ ಬದಲಾವಣೆಯ ನಡೆಗಳಿಂದ ದೇಶಕ್ಕೆ ಹೆಚ್ಚಿನ ಅಪಾಯವಿದೆ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಹೇಳಿದರು.
ಪಟ್ಟಣದ ತೇರುಬೀದಿಯಲ್ಲಿ ದಲಿತ ಸಂಘರ್ಷ ಸಮಿತಿ ಸೋಮವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಮತ್ತು ಬಾಬು ಜಗಜೀವನ್‍ರಾಂ ಜಯಂತ್ಯುತ್ಸವವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಎಲ್ಲೆಡೆ ಸಂವಿಧಾನ ಬದಲಾವಣೆ ಮಾಡುತ್ತೇವೆ. ಹೊಸ ಸಂಸ್ಕೃತಿಯನ್ನು ಸೃಷ್ಟಿಸುತ್ತೇವೆ ಎಂಬ ಭ್ರಮೆಯಲ್ಲಿ ಕೆಲವು ರಾಜಕೀಯ ಪಕ್ಷಗಳಿವೆ. ಇದರಿಂದಾಗಿ ದೇಶದಲ್ಲಿ ಆತಂಕದ ವಾತಾವರಣ ಇದೆ ಎಂದರು.
ಅಂಬೇಡ್ಕರ್ ಜಯಂತಿ ಇದೀಗ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಮುದಾಯಕ್ಕೆ ಸೇರಿದ 18 ಶಾಸಕರಿದ್ದರು. ಇದೀಗ 6ಕ್ಕೆ ಇಳಿದಿದೆ. ಸಮುದಾಯದ ಶಾಸಕರ ಸಂಖ್ಯೆ ಇಳಿಮುಖಕ್ಕೆ ಒಗ್ಗಟ್ಟಿನ ಕೊರತೆ ಕಾರಣವಾಗಿದೆ ಎಂದು ಅವರು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರವಿದ್ದಾಗ ಎಸ್ ಸಿಪಿ, ಟಿಎಎಸ್ ಪಿ ಯೋಜನೆ ಜಾರಿಗೊಳಿಸಿದೆ. ಈಗ ಈ ಹಣ ಅನ್ಯ ಕಾರ್ಯಗಳಿಗೆ ಬಳಕೆಯಾಗುತ್ತಿದೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಲಂಬಾಣಿ, ಭೋವಿ ಸೇರಿ ಇತರೆ ಜಾತಿಗಳು ಮೀಸಲಾತಿಯನ್ನು ದೊಡ್ಡ ಪ್ರಮಾಣದಲ್ಲಿ ಬಳಸಿಕೊಂಡಿವೆ ಎಂದು ಆರೋಪಿಸಿದ ಅವರು, ಪರಿಶಿಷ್ಟ ಜನಾಂಗದ ಪ್ರತಿ ಕುಟುಂಬಕ್ಕೆ ರೂ. 25 ಲಕ್ಷ ನೇರವಾಗಿ ನೀಡುವ ಯೋಜನೆ ಜಾರಿಯಾಗಬೇಕು. ಸಮುದಾಯದವರಿಗೆ ನೇರ ಸಾಲ ನೀಡುವಂತೆ ಒತ್ತಾಯಿಸಿ ರಾಜ್ಯ ಸರ್ಕಾರದ ಜತೆಗೆ ಮಾತುಕತೆ ನಡೆಸಲಾಗುವುದು ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


