‘ಸಾಂಸ್ಕೃತಿಕ ಟ್ರಸ್ಟ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಹೆಚ್ಚಿನ ಬಲ ತುಂಬುವ ಕೆಲಸ ಮಾಡಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಭರವಸೆ ನೀಡಿದರು.
ಇಲ್ಲಿ ಶನಿವಾರ ವಿವಿಧ ಟ್ರಸ್ಟ್ ಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದರು. ‘ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 24 ಟ್ರಸ್ಟ್ ಗಳಿಗೆ ಕಾರ್ಯ ಚಟುವಟಿಕೆ ಅನುಸಾರ ಅನುದಾನ ಒದಗಿಸಲಾಗುವುದು’ ಎಂದು ತಿಳಿಸಿದ ಅವರು, ‘ಜಿಲ್ಲಾ ಪ್ರವಾಸದ ವೇಳೆ ಟ್ರಸ್ಟ್‌ಗಳ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ’ ಎಂದು ಹೇಳಿದರು. ಬೆಟಗೇರಿ ಕೃಷ್ಣಶರ್ಮರ ಮನೆಯನ್ನು ಸ್ಮಾರಕವಾಗಿಸುವುದರ ಬಗ್ಗೆ ಇಲಾಖೆಯ ಅಧಿಕಾರಿಗಳು ವಿವರಿಸಿದರು. ಇದಕ್ಕೆ ಸಕಾರಾತ್ಮವಾಗಿ ಸ್ಪಂದಿಸಿದ ಸಚಿವರು, ಈ ಬಗ್ಗೆ ವಿವರಗಳನ್ನು ತರಿಸಿಕೊಳ್ಳುತ್ತೇನೆ ಎಂದು ಹೇಳಿದರು. ಕಲಾವಿದೆ ಬಿ.ಜಯಶ್ರೀ ಅವರು ಗುಬ್ಬಿವೀರಣ್ಣರಂಗ ಮಂದಿರಕ್ಕೆ ಅನುದಾನ ಹೆಚ್ಚಿಸುವಂತೆ ಮನವಿ ಮಾಡಿದರು.
‘ಗಳಗನಾಥ ಮತ್ತು ರಾಜ ಪುರೋಹಿತ ಟ್ರಸ್ಟ್ ಗಳ ಕಟ್ಟಡ ನಿರ್ಮಾಣಕ್ಕೆ 12 ಕೋಟಿ ಅನುದಾನ ಒದಗಿಸುವ ಬಗ್ಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಹೇಳಿದರು. ಅನುದಾನ ಹೆಚ್ಚಳದ ಬಗ್ಗೆ ಪರಿಶೀಲಿಸುವುದಾಗಿ ತಂಗಡಗಿ ಭರವಸೆ ನೀಡಿದರು.
ಹಾಲಭಾವಿ ಟ್ರಸ್ಟ್ ನ ಪ್ರತಿನಿಧಿಗಳು ಹಾಲಭಾವಿ ಅವರ ಹೆಸರಿನಲ್ಲಿ ಕಲಾ ಗ್ಯಾಲರಿ ನಿರ್ಮಿಸಬೇಕು ಎಂದು ಮನವಿ ಮಾಡಿಕೊಂಡರು.
ನಿಜಲಿಂಗಪ್ಪ ಟ್ರಸ್ಟ್ ಪರವಾಗಿ ಮಾಜಿ ಸಂಸದ ಹನುಮಂತಪ್ಪ ಮಾತನಾಡಿ, ‘ಸರ್ಕಾರಿ ಅಧಿಕಾರಿಗಳ ನೇಮಕದ ಬಗ್ಗೆ ಪರಿಶೀಲನೆನಡೆಸಬೇಕು’ ಎಂದು ಹೇಳಿದರು.
ಸ್ತಬ್ಧಚಿತ್ರ ಪ್ರದರ್ಶಿಸಿ: ಕುವೆಂಪು ಟ್ರಸ್ಟ್ ನ ಕಾರ್ಯದರ್ಶಿ ಕಡಿದಾಳ್ ರಮೇಶ್, ‘ಕುವೆಂಪು ಅವರ ಮನೆಯನ್ನು ರಾಷ್ಟ್ರದ ಅತ್ಯುತ್ತಮ ಕವಿಮನೆಯನ್ನಾಗಿ ಮಾಡಿದ್ದೇವೆ. ಇದು ಇಡೀ ರಾಷ್ಟ್ರದ ಗಮನ ಸೆಳೆಯುವಂತೆ ಮಾಡಲು ಗಣರಾಜ್ಯೋತ್ಸವ, ಸ್ವಾತಂತ್ರೋತ್ಸವ ಹಾಗೂ ದಸರಾ ಪ್ರದರ್ಶನಗಳಲ್ಲಿ ಸ್ತಬ್ಧ ಚಿತ್ರ ಪ್ರದರ್ಶಿಸಬೇಕು. ಆಗ ಕವಿ ಮನೆಗೆ ಒಳ್ಳೆಯ ಪ್ರಚಾರ ಸಿಗುತ್ತದೆ. ಅಲ್ಲದೆ, ಲಾಲ್ ಬಾಗ್ ನಲ್ಲಿ ಪ್ರತಿವರ್ಷ ಆಯೋಜಿಸುವ ಫಲಪುಷ್ಪ ಪ್ರದರ್ಶನದಲ್ಲಿ ಅವರ ಮನೆಯ ಮಾದರಿಯನ್ನು ರೂಪಿಸಬೇಕು’ ಎಂದು ತಿಳಿಸಿದರು. ದ.ರಾ.ಬೇಂದ್ರೆ ಅವರ ಜನ್ಮದಿನವನ್ನು ‘ವಿಶ್ವಕವಿ ದಿನಾಚರಣೆ’ಯಾಗಿ ಅಚರಿಸಬೇಕು ಎಂದು ಬೇಂದ್ರೆ ಟ್ರಸ್ಟ್ ನ ಪ್ರತಿನಿಧಿಗಳು ಮನವಿ ಮಾಡಿಕೊಂಡರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


