ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಅಗತ್ಯವಿದ್ದರೆ ಪೊಲೀಸರು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ನಾವು ಯಾರನ್ನೂ ಕೂಡ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಮುಕ್ತ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತದೆ. ಪೊಲೀಸರು ಯಾರಿಗೆ ಅಗತ್ಯವಿದೆಯೋ ಅವರಿಗೆ ನೋಟಿಸ್ ನೀಡುತ್ತಾರೆ. ಇದರಲ್ಲಿ ನಮ್ಮ ಇಲಾಖೆಯ ಹಸ್ತಕ್ಷೇಪ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಗಾಗಲೇ ಉಡುಪಿ ಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಈಶ್ವರಪ್ಪನವರಿಗೆ ನೋಟಿಸ್ ನೀಡುವ ಕುರಿತು ಪೊಲೀಸರು ತೀರ್ಮಾನ ಮಾಡುತ್ತಾರೆ. ಇದನ್ನು ನಮ್ಮ ಇಲಾಖೆ ನಿರ್ಧರಿಸುವುದಿಲ್ಲ ಎಂದು ಪುನರುಚ್ಚರಿಸಿದರು.
ಪಿಎಸ್ಐ ಅಕ್ರಮ ನೇಮಕಾತಿ ಕುರಿತಂತೆ ಸಿಐಡಿ ತನಿಖಾ ತಂಡ ಹಲವು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ಸಾಕ್ಷಿ ಸಮೇತವಾಗಿ ವಶಕ್ಕೆ ಪಡೆಯುತ್ತಿದ್ದಾರೆ. ಮತ್ತಷ್ಟು ಆರೋಪಿಗಳು ಬಂಧನವಾಗಲಿದ್ದಾರೆ ಎಂದರು. ಶ್ರವಣಬೆಳಗೊಳದಲ್ಲಿ ಮಾಜಿ ಸಚಿವರೊಬ್ಬರ ಆಪ್ತನ ಬಂಧನ ಕುರಿತು ಪ್ರತಿಕ್ರಿಯಿಸಿದ ಜ್ಞಾನೇಂದ್ರ ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ.
ಗೊತ್ತಿಲ್ಲದ ಮಾಹಿತಿ ಬಗ್ಗೆ ಪ್ರತ್ರಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.ನಾನು ಮುಕ್ತವಾಗಿ ತನಿಖೆ ನಡೆಸಬೇಕೆಂದು ಸೂಚನೆ ಕೊಟ್ಟಿದ್ದೇನೆ. ಪಕ್ಷ, ಪಂಗಡಕ್ಕಿಂತ ಯಾರೇ ತಪ್ಪು ಮಾಡಿದರೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಈ ಅಕ್ರಮ ಪ್ರಕರಣದಲ್ಲಿ ಕಾಂಗ್ರೆಸ್ನ ಇಬ್ಬರು ಕಿಂಗ್ಪಿನ್ಗಳನ್ನು ಬಂಸಲಾಗಿದೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದವರೇ ಹೆಚ್ಚಾಗಿ ಬಂಧನವಾಗುತ್ತಿದ್ದಾರೆ. ಯಾರನ್ನೂ ಕೂಡ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ತಪ್ಪು ಮಾಡಿದವರಿಗೆ ಕಾನೂನು ಪ್ರಕಾರವೇ ಶಿಕ್ಷಯಾಗಲಿದೆ ಎಂದು ಎಚ್ಚರಿಸಿದರು.
ಸಾರ್ವಜನಿಕ ಸ್ಥಳ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸುವ ಕುರಿತು ಸರ್ಕಾರದ ಮಾರ್ಗಸೂಚಿಯನ್ನು ಎಲ್ಲರು ಪಾಲನೆ ಮಾಡಬೇಕು. ಧ್ವನಿವರ್ಧಕಗಳನ್ನು ಬಳಕೆ ಮಾಡಲು ಬೆಳಗ್ಗೆ 6ರಿಂದ ರಾತ್ರಿ 10 ಗಂಟೆವರೆಗೆ ಅವಕಾಶ ಕೊಡಲಾಗಿದೆ.
ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ಕಾನೂನು ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. ಧ್ವನಿವರ್ಧಕ ಬಳಕೆ ಮಾಡುವವರು ಸಂಬಂಧಪಟ್ಟವರಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆಯಲೇಬೇಕು. ಒಂದು ವೇಳೆ ಸ್ಥಳೀಯ ಮಟ್ಟದಲ್ಲಿ ಅನುಮತಿ ಪಡೆಯದಿದ್ದರೆ ತತ್ಕ್ಷಣವೇ ತೆರವುಗೊಳಿಸಲಾಗುವುದು. ಇದರಲ್ಲಿ ರಾಜೀ ಪ್ರಶ್ನೆಯೇ ಇಲ್ಲೆ ಎಂದರು.
ನಾನು ಗೃಹ ಇಲಾಖೆಯಲ್ಲಿ ಈಗ ಅನುಭವಿಯಾಗಿದ್ದೇನೆ. ಈ ಖಾತೆ ನನಗೆ ಸಾಕು ಅನ್ನಿಸಿಲ್ಲ. ನಿಮಗೆ ಸಾಕು ಅನ್ನಿಸುತ್ತಾ ಹೇಳಿ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ ಅವರು, ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದರು.
ವರದಿ: ಆಂಟೋನಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


