ಸರಗೂರು: ಆದಿ ಕರ್ನಾಟಕ ಮಹಾಸಭಾ ತಾಲ್ಲೂಕು ಘಟಕದಿಂದ ಪಟ್ಟಣದಲ್ಲಿ ಗುರುವಾರ ಪ್ರಮುಖ ಬೀದಿಗಳಲ್ಲಿ ಬೈಕ್ ರ‍್ಯಾಲಿ ನಡೆಸುವ ಮೂಲಕ ಮಹಾರ್ ವೀರಯೋಧರ ಭೀಮ ಕೋರೆಗಾಂವ್ 208ನೇ ವರ್ಷದ ವಿಜಯೋತ್ಸವ ಕಾರ್ಯಕ್ರಮ ನಡೆಸಲಾಯಿತು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಮುಂಭಾಗದಲ್ಲಿ ಜಮಾವಣೆಗೊಂಡ ದಲಿತ ಸಮಾಜದ ಮುಖಂಡರು ಬೈಕ್ ರ‍್ಯಾಲಿಯಲ್ಲಿ ಹೊರಟ ಮೆರವಣಿಗೆಯು ಪಟ್ಟಣ ಪಂಚಾಯಿತಿ ಮುಂದೆ ಕೊನೆಗೊಂಡಿತು. ನಂತರ ಪಟಾಟಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಆದಿ ಕರ್ನಾಟಕ ಮಹಾಸಭಾದ ತಾಲೂಕು ಅಧ್ಯಕ್ಷ ಇಟ್ನ ರಾಜಣ್ಣ ಮಾತನಾಡಿ, ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲು ಕೀಳುಗಳ ವಿರುದ್ಧ ಹೋರಾಡಲು 28 ಸಾವಿರ ಪೇಶ್ವೆಗಳನ್ನು 500 ಮಹಾರ್ ಸೈನಿಕರು ಸೋಲಿಸಿ ವಿಜಯಪತಾಕೆ ಹಾರಿಸಿದ ದಿನವನ್ನು ಕೋರೆಗಾಂವ್ ವಿಜಯೋತ್ಸವವಾಗಿ ದೇಶಾದ್ಯಂತ ಆಚರಣೆ ಮಾಡಲಾಗುತ್ತಿದೆ. ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಮುಂದಾದ ಮಹಾರ್ ಸೈನಿಕರ ಧೈರ್ಯ ಸಾಹಸ ಮೆಚ್ಚುವಂತಾಗಿದೆ ಎಂದು ಹೇಳಿದರು.
ಮಹಾಸಭಾದ ಮಾಜಿ ಅಧ್ಯಕ್ಷ ಶಿವಣ್ಣ ಮಾತನಾಡಿ, ಸ್ವಾಭಿಮಾನ ಮತ್ತು ಆತ್ಮಗೌರವಕ್ಕಾಗಿ ನಡೆದ ಯುದ್ಧವೇ ಭೀಮಾ ಕೋರೆಗಾಂವ್ ಹೋರಾಟ. ಇದು ಚರಿತ್ರಾರ್ಹ ಐತಿಹಾಸಿಕ ವಿಜಯೋತ್ಸವವಾಗಿದೆ. ಬ್ರಿಟಿಷರು ಭಾರತ ದೇಶದಲ್ಲಿ ಒಂದೊಂದೆ ಪ್ರಾಂತ್ಯಗಳನ್ನು ವಶಪಡಿಸಿಕೊಂಡು ಬರುತ್ತಿದ್ದ ಕಾಲಗಟ್ಟವದು. ಮನುವಾದಿ ಪೇಶ್ವೆಗಳ ದುರಾಡಳಿತದ ವಿರುದ್ಧ ಸಿಡಿದೆದ್ದರು ಎಂದು ತಿಳಿಸಿದರು.
ಗೌರವಾಧ್ಯಕ್ಷ ಇದಿಯಪ್ಪ, ಉಪಾಧ್ಯಕ್ಷರಾದ ಹಳೆಯೂರು ಚಿನ್ನಯ್ಯ, ಕಾಳಸ್ವಾಮಿ, ಶಿವಣ್ಣ, ಖಜಾಂಚಿ ಶ್ರೀನಿವಾಸ್, ಮಸಹಳ್ಳಿ ಸೂರ್ಯ ಕುಮಾರ್,ಮಾಜಿ ಪ್ರಧಾನ ಕಾರ್ಯದರ್ಶಿ ಮಲ್ಲೇಶ್, ವೆಂಕಟಾಚಲ ಮಹೇಶ್, ತುಂಬಸೋಗೆ ನಾಗಣ್ಣ, ಶ್ರೀನಿವಾಸ್, ಸರಗೂರು ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ಸಣ್ಣಸ್ವಾಮಿ, ಕೂಡಗಿ ಗೋವಿಂದರಾಜು, ಬಿಲ್ಲಯ್ಯ,ಹುನಗಹಳ್ಳಿ ಗೋವಿಂದ , ಪಾಟೀಲ್,ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


