ಸರಗೂರು: ಚರಂಡಿ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರು ಪ್ರತಿ ದಿನ ತೊಂದರೆಗೀಡಾಗುತ್ತಿರುವ ಘಟನೆ ಸರಗೂರಿನ ಮುಖ್ಯ ರಸ್ತೆಯಲ್ಲಿರುವ ಶಿವಲೀಲಾ ಗೊಬ್ಬರ ಅಂಗಡಿಯ ಮುಂಭಾಗದಲ್ಲಿ ನಡೆಯುತ್ತಿದ್ದು, ಅಂಗಡಿ ಮಾಲಿಕರು, ಸಾರ್ವಜನಿಕರು ಹಲವಾರು ವರ್ಷಗಳಿಂದ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.
ಅಂಗಡಿಯ ಮುಂಭಾಗದಲ್ಲಿಯೇ ಚರಂಡಿಯ ನೀರು ಹರಿಯುತ್ತಿದೆ. ಈ ಭಾಗ ಹೆಚ್ಚಾಗಿ ಜನ ಸಂಚಾರದ ಪ್ರದೇಶವಾಗಿದ್ದು, ಮಕ್ಕಳು, ಮಹಿಳೆಯರು, ವೃದ್ಧರು ಎನ್ನದೇ ಎಲ್ಲರೂ ಇದೇ ಕೊಳಚೆ ನೀರನ್ನು ತುಳಿದುಕೊಂಡು ನಡೆದುಕೊಂಡು ಹೋಗುವಂತಾಗಿದೆ.
ಇನ್ನೊಂದೆಡೆ ಅಂಗಡಿಗೆ ಆಗಮಿಸುವ ಗ್ರಾಮಸ್ಥರ ಪಾಡು ಹೇಳತೀರದು. ಇದೇ ಚರಂಡಿ ನೀರನ್ನು ತುಳಿದುಕೊಂಡು ಬರುವ ದುಸ್ಥಿತಿ ಗ್ರಾಹಕರದ್ದಾಗಿದೆ. ಚರಂಡಿಯ ದುರ್ವಾಸನೆಯಿಂದಾಗಿ ಈ ಭಾಗಕ್ಕೆ ಗ್ರಾಹಕರು ಬರಲು ಹಿಂದೇಟು ಹಾಕುತ್ತಿದ್ದು, ಇದರಿಂದಾಗಿ ಅಂಗಡಿ ಮಾಲಿಕರಿಗೆ ನಷ್ಟ ಉಂಟಾಗುತ್ತಿದೆ.
ಈ ವಿಚಾರವಾಗಿ ಮಾತನಾಡಿದ ಶಿವಲೀಲಾ ಗೊಬ್ಬರದ ಅಂಗಡಿಯ ಮಾಲೀಕ ಮಂಜು ಪ್ರಸಾದ್, ಮುಖ್ಯ ರಸ್ತೆಯನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿಯೇ ಸರಿಯಾದ ಒಳಚರಂಡಿ ನಿರ್ಮಾಣ ಮಾಡಿ ಎಂದು ಮನವಿ ಮಾಡಿದರು ಸಹ ಇದರ ಬಗ್ಗೆ ಗಮನ ಹರಿಸಲಿಲ್ಲ. ಹೀಗಾಗಿ ಸತತ 8 ವರ್ಷಗಳಿಂದ ಒಳಚರಂಡಿ ಸಮಸ್ಯೆ ಕಾಣುತ್ತಿದೆ, ಆದರೆ ಯಾವುದೇ ಜನಪ್ರತಿನಿಧಿಗಳು, ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಮುಂದೆ ಬರುತ್ತಿಲ್ಲ ಎಂದರು.
ಇದೇ ಭಾಗದಲ್ಲಿರುವ ರಾಯಲ್ ಬೇಕರಿಯ ಮಾಲಿಕ ಮಾತನಾಡಿ, ಗ್ರಾಹಕರು ಅಂಗಡಿಗೆ ಬರುವಾಗ ಮೂಗು ಮುಚ್ಚಿಕೊಂಡು ಬಂದು ವಸ್ತುಗಳನ್ನು ಖರೀದಿಸುವಂತಾಗಿದೆ. ಈ ಸಮಸ್ಯೆಯಿಂದಾಗಿ ರಸ್ತೆ ಬದಿ ವ್ಯಾಪಾರಿಗಳ ವ್ಯಾಪರಕ್ಕೂ ಹೊಡೆತ ಬಿದ್ದಿದೆ. ಮುಖ್ಯ ರಸ್ತೆಯ ಒಳಚರಂಡಿಗಳ ಸ್ಥಿತಿಯೇ ಹೀಗಿದ್ದರೆ, ಚರಂಡಿಗಳ ಪರಿಸ್ಥಿತಿ ಏನು? ಒಳಚರಂಡಿ ನೀರಿನ ಸಮಸ್ಯೆಯಿಂದಾಗಿ ಗ್ರಾಹಕರು ನಮ್ಮ ಬೇಕರಿಗೆ ತಿಂಡಿ ತಿನಿಸುಗಳನ್ನು ಖರೀದಿಸಲು ಯಾರೂ ಸಹ ಮುಂದಾಗುತ್ತಿಲ್ಲ. ದಯವಿಟ್ಟು ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮಸ್ಯೆ ಪರಿಶೀಲಿಸಿ ಬಗೆಹರಿಸಲು ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.
ಸಾರ್ವಜನಿಕ ಪ್ರದೇಶದಲ್ಲಿಯೇ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಇಲ್ಲಿನ ಅಧಿಕಾರಿಗಳು ವಿಫಲವಾಗಿರುವುದು ಬೆಳಕಿಗೆ ಬಂದಿದೆ. ಮಳೆಗಾಲದಲ್ಲಂತೂ ಅಂಗಡಿಗಳ ಒಳಗೆಯೇ ಚರಂಡಿ ನೀರು ನುಗ್ಗುತ್ತಿದ್ದು, ಯಾರೂ ಹೇಳುವವರು ಕೇಳುವವರೇ ಇಲ್ಲ ಎನ್ನುವಂತಾಗಿದೆ ಎನ್ನುವ ಆಕ್ರೋಶದ ಮಾತುಗಳು ಕೇಳಿ ಬಂದಿವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy