ಸರಗೂರು: ತಾಲೂಕಿನಲ್ಲಿ ಮಾನವ ಮತ್ತು ಕಾಡಾನೆ ನಡುವಣ ಸಂಘರ್ಷ ಮುಂದುವರಿದಿದ್ದು, ಗುರುವಾರ ಬೆಳಗಿನ ಜಾವ ಕಾಡಾನೆ ದಾಳಿಗೆ ರೈತರೊಬ್ಬರು ಬಲಿಯಾಗಿರುವ ದಾರುಣ ಘಟನೆ ಬಿ.ಮಟಕರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಟಿ ಕಾಲೋನಿಯಲ್ಲಿ ನಡೆದಿದೆ.
ಘಟನೆಯ ವಿವರ: ಮೃತ ರೈತರನ್ನು ಎಸ್.ಟಿ.ಕಾಲೋನಿ ಗ್ರಾಮದ ನಿವಾಸಿ ಮಾದ (75) ಎಂದು ಗುರುತಿಸಲಾಗಿದೆ. ಗುರುವಾರ ಬೆಳಿಗ್ಗೆ ಮಾದ ಅವರು ಮಲ ವಿಸರ್ಜನೆಗಾಗಿ ಜಮೀನಿನ ಕಡೆಗೆ ತೆರಳಿದ್ದಾಗ, ಮೊಳೆಯೂರು ವಲಯದಿಂದ ಬಂದ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದೆ. ಆನೆಯು ಅವರನ್ನು ತುಳಿದು ಹಾಕಿದ್ದರಿಂದ ಮಾದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಹಳ ಹೊತ್ತಾದರೂ ಮಾದ ಅವರು ಮನೆಗೆ ಮರಳದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಹುಡುಕಿಕೊಂಡು ಹೋದಾಗ, ಬಂಡೀಪುರ ಗ್ಯಾಸ್ ಗೋಡೌನ್ ಪಕ್ಕದ ರಸ್ತೆಯ ಬಳಿ ಶವವು ಅರೆನಗ್ನಾವಸ್ಥೆಯಲ್ಲಿ ಪತ್ತೆಯಾಗಿದೆ.
ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ:
ಘಟನೆ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ನೂರಾರು ಗ್ರಾಮಸ್ಥರು ಮತ್ತು ಸಂಬಂಧಿಕರು ಜಮಾಯಿಸಿ ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ರೈಲು ಕಂಬಿಗಳ ಬ್ಯಾರಿಕೇಡ್ ಗಳು ಹಲವೆಡೆ ಮುರಿದುಬಿದ್ದಿವೆ. ಆನೆಗಳು ರಾಜಾರೋಷವಾಗಿ ಜಮೀನುಗಳಿಗೆ ನುಗ್ಗುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ” ಎಂದು ಗ್ರಾಮಸ್ಥರು ಕಿಡಿಕಾರಿದರು. ಹಂಚೀಪುರ, ಮಟಕರೆ, ಹೀರಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಬೆಳಿಗ್ಗೆಯೂ ಆನೆಗಳು ಸಂಚರಿಸುತ್ತಿದ್ದು, ಜನರು ಓಡಾಡಲು ಭಯಪಡುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಪರಿಸ್ಥಿತಿ ಉದ್ವಿಗ್ನಗೊಂಡಿದ್ದಾಗ ಸರಗೂರು ಪಿಎಸ್ ಐ ಆರ್. ಕಿರಣ್ ಮತ್ತು ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಿಸಿದರು. ನಂತರ ಎಸಿಎಫ್ ಪ್ರಭಾಕರನ್ ಮತ್ತು ಅರಣ್ಯ ಸಿಬ್ಬಂದಿ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಪರಿಹಾರ ಘೋಷಣೆ:
ಸ್ಥಳದಲ್ಲೇ ಸಿಸಿಎಫ್ ಪ್ರಭಾಕರನ್ ಅವರು ರೈತನ ಸಾವಿಗೆ ವಿಷಾದ ವ್ಯಕ್ತಪಡಿಸಿ, ಪರಿಹಾರ ಕ್ರಮಗಳನ್ನು ತಿಳಿಸಿದರು. ಮೃತರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ತಕ್ಷಣವೇ ₹20 ಲಕ್ಷ ಮೊತ್ತದ ಚೆಕ್ ವಿತರಿಸಲಾಯಿತು. ಮೃತರ ಪತ್ನಿಗೆ ಪ್ರತಿ ತಿಂಗಳು ₹4,000 ಮಾಸಾಶನ ನೀಡುವ ದಾಖಲೆಗಳನ್ನು ಸ್ಥಳದಲ್ಲೇ ಸಿದ್ಧಪಡಿಸಲಾಯಿತು.
ಉದ್ಯೋಗ ಭರವಸೆ: ಕುಟುಂಬದ ಒಬ್ಬ ಸದಸ್ಯರಿಗೆ ಇಲಾಖೆಯಲ್ಲಿ ಕೆಲಸ ನೀಡುವುದಾಗಿ ಭರವಸೆ ನೀಡಿದರು.
ಆನೆ ಹಿಡಿಯುವ ಕಾರ್ಯಾಚರಣೆ: ಇಂದಿನಿಂದಲೇ ಆನೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು ಮತ್ತು ರೈಲು ಬ್ಯಾರಿಕೇಡ್ ಸರಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರಗೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ಮಾದ ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.
ಈ ಸಂದರ್ಭದಲ್ಲಿ ಚಿಕ್ಕಬೋಮ್ಮ, ಅಣ್ಣಯ್ಯ ಸ್ವಾಮಿ,ಗ್ರಾಪಂ ಅಧ್ಯಕ್ಷ ದೇವದಾಸ್, ನಾಗರಾಜು, ಚಿಕ್ಕಕ್ಯಾತ, ಮಣಿಕಂಠ, ಶ್ರೀನಿವಾಸ ಸೇರಿದಂತೆ ಅನೇಕರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


