ಸರಗೂರು: ವಿದ್ಯಾರ್ಥಿ ಜೀವನದಲ್ಲಿ ಅನುಭವಿಸಿದ ಸ್ಮರಣೀಯ ದಿನಗಳನ್ನು ಮೆಲುಕು ಹಾಕಲು ಹಿಂದೂ ಹೈಸ್ಕೂಲ್‌ನ 1988–89ರ ಬ್ಯಾಚ್ ವಿದ್ಯಾರ್ಥಿಗಳು 36 ವರ್ಷಗಳ ನಂತರ ಜೀವನಕ್ಕೆ ಆದರ್ಶ ಮಾರ್ಗ ತೋರಿಸಿದ ಶಿಕ್ಷಕರನ್ನು ಗುರುವಂದನಾ ಕಾರ್ಯಕ್ರಮದ ಮೂಲಕ ಗೌರವ ಅರ್ಪಿಸುತ್ತಿರುವುದು ಶ್ಲಾಘನೀಯವಾಗಿದ್ದು ಎಂದು ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಪಡುವಲ ವಿರಕ್ತ ಮಠದ ಮಹದೇವಸ್ವಾಮಿಗಳು ಹೇಳಿದರು.
1988–89 ಸಾಲಿನಲ್ಲಿ ಶಿಕ್ಷಣ ಪಡೆದ ಹಳೆ ವಿದ್ಯಾರ್ಥಿಗಳ ಸ್ನೇಹ ಸಂಗಮ ಹಾಗೂ ಗುರುವಂದನ ಕಾರ್ಯಕ್ರಮ ಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ ದಂದು ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ದಿವ್ಯ ಸಾನಿಧ್ಯ ವಹಿಸಿ ಉದ್ಘಾಟಿಸಿ ಮಾತನಾಡಿದರು.
1988 ರಲ್ಲಿ 8ನೇ ತರಗತಿ ಸೆರಿ ಎಸ್ ಎಸ್ ಎಲ್ಸಿ ಶಿಕ್ಷಣ ಪಡೆದ ಹಳೆ ವಿದ್ಯಾರ್ಥಿಗಳು ತಾವು ಓದಿದ ಸಾಲಿನಲ್ಲಿ ಸೇರಿ ಅಕ್ಷರ ಕಳಿಸಿದ ಶಿಕ್ಷಕರಿಗೆ ಸನ್ಮಾನಿಸಿ ನೆನೆಪಿನ ಕಾಣಿಕೆ ನೀಡಿದರು.
ಹಳೆ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣ, ನೌಕರಿ ಪಡೆದ ಸಂಗತಿಯನ್ನು ಹಂಚಿಕೊಂಡರು. ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವೆ ಅವಿನಾಭಾವ ಸಂಬಂಧ ಇದೆ. ಗುರು ಬ್ರಹ್ಮ, ಗುರು ವಿಷ್ಣು ಮಹೇಶ್ವರ ಎಂದು ಗುರುಗಳನ್ನು ಗೌರವಿಸಲಾಗುತ್ತದೆ. ಮನೆಯಲ್ಲಿ ತಂದೆ ತಾಯಿ ನಂತರ ಗುರುಗಳ ಸ್ಥಾನ ಮಹತ್ವಪೂರ್ಣವಾಗಿದೆ. ಯಾವುದೇ ರೀತಿಯ ಶರತ್ತು ಬದ್ಧತೆ ಇಲ್ಲದೇ ಪ್ರೀತಿ ತೋರುವ ತಂದೆ ತಾಯಿ ನಂತರ ಎರಡನೇ ಸ್ಥಾನವೇ ಗುರುವಿನದು. ನಿಷ್ಕಲ್ಮಶ ನಿಸ್ವಾರ್ಥ ಭಾವನೆಯಿಂದ ವಿದ್ಯಾರ್ಥಿಗಳನ್ನು ಸರಿ ಮಾರ್ಗದತ್ತ ಗುರುವು ಕೊಂಡೊಯ್ಯುತ್ತಾನೆ. ಆ ಕಾರಣದಿಂದ ವಿದ್ಯಾರ್ಥಿಗಳು ಜೀವನದಲ್ಲಿ ಆದರ್ಶ ಗುರುವಿನ ಮಾರ್ಗ ಅನುಸರಿಸಿ ಸಾಧನೆ ತೋರಲು ಸಾಧ್ಯವಾಗಿದೆ ಎಂದರು.
ಮಾಜಿ ಜಿಪಂ ಸದಸ್ಯ ಪಿ.ರವಿ ಮಾತನಾಡಿ, ಶಾಲಾ ದಿನಗಳಲ್ಲಿ ಅತ್ಯಂತ ಮಹತ್ವಪೂರ್ಣವಾದ ಕಲಿಕೆ, ಆಟೋಟ, ತುಂಟತನ, ಚೇಷ್ಟೆ, ಗುರುಗಳ ಪ್ರೀತಿ ಮೆಲುಕು ಹಾಕಲು ಗುರುಗಳ ಪ್ರೀತಿ ಪ್ರೇರೇಪಿಸುತ್ತದೆ. ಮನುಷ್ಯನ ಬಾಲ್ಯಾವಸ್ಥೆಯಿಂದ ಹದಿಹರೆಯದ ತನಕ ಬದುಕು ಒತ್ತಡಮಯವಾಗಿರುತ್ತದೆ. 13, 14, 15, 16 ಮತ್ತು 40 ನೇ ವಯಸ್ಸಿನ ಆಸುಪಾಸಿನಲ್ಲಿದ್ದಾಗ ಜೀವನವು ಅದ್ಭುತವಾದ ಅನುಭವ ತೆರೆದಿಡುತ್ತದೆ. ಇಂತಹ ಸಂದರ್ಭದಲ್ಲಿ ಪ್ರೀತಿ, ವಿಶ್ವಾಸ, ಸುಖದ ಅನುಭೂತಿಯಾದಾಗ ಮಾನಸಿಕ ನೆಮ್ಮದಿ ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ಜೀವನದಲ್ಲಿ ಸ್ವಯಂ ಕಲಿಕೆ ಹಾಗೂ ಗುರುಗಳ ಮಾರ್ಗದರ್ಶನ ವ್ಯಕ್ತಿಯನ್ನು ಸಾಧನೆಯ ಉತ್ತುಂಗಕ್ಕೆ ಏರಿಸಬಲ್ಲದು ಎಂದರು.
ಶಿಕ್ಷಕರು ನಿವೃತ್ತಿ ನಂತರ ಎಲ್ಲವೂ ಮುಗಿಯಿತು ಎಂದು ನಕಾರಾತ್ಮಕ ಯೋಚನೆ ಬಿಡಬೇಕು. ಸಾಧಿಸುವುದು ಇನ್ನಷ್ಟು ಇದೆ ಎಂಬ ಧನಾತ್ಮಕ ಭಾವನೆಯಿಂದ ಸಾಧಿಸುವ ಛಲ ತೊಡಬೇಕು.ಜೀವನದ ಪ್ರತಿಯೊಂದು ಕ್ಷಣವೂ ಮರೆಯಲಾಗದ ಅನುಭವ ನೀಡುತ್ತವೆ.ಆಯಾ ವಯೋಮಾನಕ್ಕೆ ತಕ್ಕಂತೆ ಆಯಾ ಕ್ಷಣಗಳು ನೆಮ್ಮದಿಯ ಅನುಭೂತಿಯ ಪ್ರೇರಣೆ ನೀಡುತ್ತವೆ.
ತಾಲೂಕಿನ ಯುವ ಜನಾಂಗ ವಿಶೇಷವಾಗಿ ಗ್ರಾಮೀಣ ಭಾಗದ ಯುವ ಜನತೆಯಲ್ಲಿ ಬಹಳಷ್ಟು ಪ್ರತಿಭೆ ಇದೆ. ತಾಲೂಕಿನ ಪದವಿ ಪೂರ್ವ ಕಾಲೇಜಿನ ಪ್ರೌಢ ವಿಭಾಗದ ಹೈಸ್ಕೂಲ್‌ನಲ್ಲಿ ಕಲಿತ ವಿದ್ಯಾರ್ಥಿಗಳು ಕೂಡ ದೇಶ ವಿದೇಶಗಳಲ್ಲಿ ನೆಲೆಸಿ ಸಾಧನೆ ಮಾಡುವ ಶಕ್ತಿ ತುಂಬಿದ ಶಿಕ್ಷಕರು ಅಭಿನಂದನಾರ್ಹರಾಗಿದ್ದಾರೆ.
ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿ ಹಾಗೂ ಶಿಕ್ಷಕರ ಸೌಹಾರ್ದ ಭಾವನೆಯಿಂದ ಉತ್ತಮ ವಿದ್ಯಾರ್ಥಿಗಳ ಸಮೂಹ ಸಮಾಜಕ್ಕೆ ನೀಡಲು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಪದವಿ ಪೂರ್ವ ಕಾಲೇಜಿನ ಪ್ರೌಢ ವಿಭಾಗದ ಹೈಸ್ಕೂಲ್ 1988–89 ರ ಎಸ್‌ಎಸ್‌ಎಲ್‌ಸಿ ಬ್ಯಾಚ್ ವಿದ್ಯಾರ್ಥಿಗಳಿಂದ ಅಂದು ಕಲಿಸಿದ ನಿವೃತ್ತ ಹಾಗೂ ಹಾಲಿ ಸೇವೆಯಲ್ಲಿರುವ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಶಿಕ್ಷಕರು ಮುಂತಾದವರು ಮಾತನಾಡಿ, ನಾವು ಕಲಿಸಿದ ವಿದ್ಯಾರ್ಥಿಗಳು ಸುಖವಾಗಿ,ನೆಮ್ಮದಿಯಾಗಿ ಬದುಕುತ್ತಿದ್ದಾರೆ ಎಂಬುದೇ ನಮಗೆ ದೊಡ್ಡ ಕಾಣಿಕೆ ಎಂದರು.
ಈ ಸಂದರ್ಭದಲ್ಲಿ ಹೆಳೆ ವಿದ್ಯಾರ್ಥಿಗಳು ಡಾ ಸೋಮಣ್ಣ,ಬಾಬು,ಡಾ ಟಿ ರವಿಕುಮಾರ್, ಎಸಿಪಿ ರಾಜಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪರಶಿವಮೂರ್ತಿ,ಕೃಷ್ಣಕುಮಾರ್, ಇದ್ದಾಯಿತ್, ರಮೇಶ್, ಗೋವಿಂದರಾಜು, ರೇಖಾ, ರೇಣುಕಾ, ಚಂದ್ರ ಕುಮಾರ್, ಬಿಇಓ ಮಹದೇವ, ಮಹದೇವಶಟ್ಟಿ, ಪ್ರಸನ್ನ, ಕುಮಾರ್, ಸರಗೂರು ಕೃಷ್ಣ, ಜಿಪಂ ಅಭಿಯಂತರರು ವಸಂತಕುಮಾರ್,ಮಹದೇವ, ಇನ್ನೂ ಹಳೆ ವಿದ್ಯಾರ್ಥಿಗಳು ಸೇರಿದಂತೆ ಕುಟುಂಬದಸ್ಥರು ಹಾಗೂ ಮುಖಂಡರು ಭಾಗಿಯಾಗಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


