ಸರಗೂರು: ನ್ಯಾಯಮೂರ್ತಿ ಬಿ.ಆರ್.ಗವಾಯಿಯವರ ಮೇಲೆ ವಕೀಲನೊಬ್ಬ ‘ಶೂ’ ಎಸೆದಿರುವ ವಿರುದ್ಧ ಸೋಮವಾರದಂದು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮುಂಭಾಗದಲ್ಲಿ ಆದಿಕರ್ನಾಟಕ ಮಹಾಸಭಾ ಹಾಗೂ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಇಟ್ನ ರಾಜಣ್ಣ, ಅಕ್ಟೋಬರ್ 06 ರಂದು ಭಾರತದ ಸರ್ವೋಚ್ಚ ನ್ಯಾಯಾಲಯದ ಆವರಣದಲ್ಲಿ ಮುಖ್ಯ ನ್ಯಾಯಮೂರ್ತಿಯವರ ಬಿ.ಆರ್.ಗವಾಯಿ ಸರ್ವೋಚ್ಚ ನ್ಯಾಯಾಲಯದ ಪೀಠದಲ್ಲಿ ಕುಳಿತು ತೀರ್ಪೊಂದನ್ನು ಪ್ರಕಟಿಸಿದ ಸಂದರ್ಭದಲ್ಲಿ, ತೀರ್ಪನ್ನು ವಿರೋಧಿಸಿ ಬಿ.ಆರ್.ಗವಾಯಿ ರವರ ಮೇಲೆ ಹಾಗೂ ಸರ್ವೋಚ್ಚ ನ್ಯಾಯಾಲಯದ ಪೀಠದ ಮೇಲೆ ಕೋಮುವಾದಿ ಮನುಸುಳ್ಳ ಕಾನೂನು ವಿರೋಧಿ ವಕೀಲನೊಬ್ಬ ‘ಶೂ’ ಎಸೆದಿದ್ದಾನೆ. ಈ ಘಟನೆಯಿಂದ ಇಡೀ ದೇಶವೇ ತಲೆ ತಗ್ಗಿಸುವಂತಾಗಿದೆ. ಈ ಘಟನೆಯನ್ನು ಸರಗೂರು ತಾಲೂಕಿನ ಆದಿ ಕರ್ನಾಟಕ ಮಹಾಸಭಾ ಹಾಗೂ ಎಲ್ಲಾ ಪ್ರಗತಿಪರ ಸಂಘಟನೆಗಳು ಸಹಾ ಒಕ್ಕೊರಳಿನಿಂದ ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಮಾಜಿ ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ ಮಾತನಾಡಿ, ಬಿ.ಆರ್.ಗವಾಯಿರವರು ಇತ್ತೀಚೆಗೆ ಇದೊಂದು ಮಾಸಿ ಹೋದ ಘಟನೆ ಎಂದು ಹೇಳಿಕೊಂಡಿದ್ದಾರೆ. ಅದು ಅವರ ದೂರದೃಷ್ಟಿ ಹಾಗೂ ತಾಯಿ ಹೃದಯವನ್ನು ಪ್ರದರ್ಶಿಸುತ್ತದೆ. ಆದರೆ ಭಾರತ ದೇಶದ ಪ್ರಜೆಗಳು ನ್ಯಾಯಾಲಯದ ಮೇಲೆ ನಂಬಿಕೆ ಉಳ್ಳವವರು, ಸಂವಿಧಾನ ಸಂರಕ್ಷಕರು ಇದನ್ನು ಖಂಡಿಸದೇ, ಪ್ರಶ್ನಿಸದೇ ಇರಲಾಗದು ಎಂದರು.
ದಸಂಸ ಜಿಲ್ಲಾ ಸಂಚಾಲಕ ಕೋಟೆ ಬೆಟ್ಟಯ್ಯ ಮಾತನಾಡಿ ಇಂತಹ ಕೋಮುವಾದಿಗಳು, ಕಾನೂನು ವಿರೋಧಿಗಳನ್ನು ಕ್ಷಮಿಸಿ ಬಿಟ್ಟರೆ, ದೇಶದ ಕಾನೂನಿಗೆ ಬೆಲೆ ಇಲ್ಲದಂತಾಗುತ್ತದೆ, ಇಂತಹ ಕಿಡಿಗೇಡಿಗಳ ಉಪಟಳ ದೇಶದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಆದುದರಿಂದ ಇಡೀ ದೇಶವೇ ತಲೆ ತಗ್ಗಿಸುವಂತಹ ತಪ್ಪನ್ನು ಮಾಡಿರುವ ಈ ರಾಕೇಶ್ ಕಿಶೋರನ ವಿರುದ್ಧ ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆ ಮತ್ತು ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಸರಗೂರು ತಾಲೂಕಿನಲ್ಲಿ ಬೃಹತ್ ಪ್ರತಿಭಟನೆ ಮಾಡುವ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದರು.
ಇದಕ್ಕೂ ಮುನ್ನ ಪಟ್ಟಣದ ಅಂಬೇಡ್ಕರ್ ಭವನದಿಂದ ಮೆರವಣಿಗೆ ನಡೆಸಿ ಬಸ್ ನಿಲ್ದಾಣದ ಬಳಿ ಸರಪಳಿ ನಿರ್ಮಿಸಿ ವಕೀಲ ರಾಕೇಶ್ ಕಿಶೋರ್ ಪ್ರತಿಕೃತಿಗೆ ಬೆಂಕಿ ಹಚ್ಚಿ ಅದೇ ಮಾರ್ಗವಾಗಿ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು.
ತಹಶೀಲ್ದಾರ್ ಮೋಹನಕುಮಾರಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸರಗೂರು ಗೌರವಾಧ್ಯಕ್ಷ ಇದಿಯಪ್ಪ,ಉಪಾಧ್ಯಕ್ಷರು ನಾಗೇಂದ್ರ ದೇವಲಾಪುರ,ಚಿನ್ನಣ್ಣ,ಕಾಳಸ್ವಾಮಿ ಚಕ್ಕೂರು, ಪುಟ್ಟಸ್ವಾಮಿ ಮುಳ್ಳೂರು,ಶಿವಣ್ಣ ಬಿ.ಸಿ.ಬಿಡಗಲು,ಪ್ರಧಾನ ಕಾರ್ಯದರ್ಶಿ, ಪ್ರಕಾಶ್ ಹಾದನೂರು, ಸಹಕಾರ್ಯದರ್ಶಿ ಸೂರ್ಯಕುಮಾರ್ ಮಸಹಳ್ಳಿ, ಖಜಾಂಚಿ. ಶ್ರೀನಿವಾಸ್ ಲಂಕೆ, ನಿರ್ದೇಶಕರು. ಹಾಲಯ್ಯ, ಪಾಪ ತೇರಣಿಮುಂಟಿ, ವೆಂಕಟಾಚಲ ಸಾಗರೆ, ಗೋವಿಂದ ರಾಜು ಕುಡಗಿ,ಗೋವಿಂದರಾಜು ಹುನಗಹಳ್ಳಿ, ಶಿವಕುಮಾರ್ ನಂಜಿಪುರ, ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ನಾಗರಾಜು ಚೆನ್ನಿಪುರ, ಸುನೀಲ್ ಬೋಸ್ ಅಭಿಮಾನಿಗಳ ಬಳಗದ ಅಧ್ಯಕ್ಷ ದೇವಲಾಪುರ ಸಿದ್ದರಾಜು, ಮಹೇಂದ್ರ ಹೂವಿನಕೊಳ, ಲೋಕೇಶ್ ಮುಳ್ಳೂರು, ಗ್ರಾಮೀಣ ಮಹೇಶ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಮಸಹಳ್ಳಿ ನವೀನ್, ಆರ್ಯ ಈಡಿಗ ಸಮಾಜದ ತಾಲ್ಲೂಕು ಅಧ್ಯಕ್ಷ ಎಸ್.ಎನ್. ನಾಗರಾಜು, ಮಾಜಿ ಜಿಪಂ ಉಪಾಧ್ಯಕ್ಷೆ ಭಾಗ್ಯಲಕ್ಷ್ಮಿ, ಕುಂದೂರು ಮೂರ್ತಿ, ಲಕ್ಷ್ಮಣ ಲಂಕೆ, ಸಣ್ಣಸ್ವಾಮಿ, ನಿಂಗರಾಜು, ಎಸ್. ಮರಿದೇವಯ್ಯ, ಶಿವು, ಅಡಹಳ್ಳಿ ಮಹದೇವ, ಸೋಮಣ್ಣ, ಇನ್ನೂ ಮುಖಂಡರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC