ವರದಿ: ಹಾದನೂರು ಚಂದ್ರ
ಸರಗೂರು: ತಾಲೂಕಿನ ಬಡಗಲುಪುರ ಗ್ರಾಮದ ರೈತನ ಮೇಲೆ ದಾಳಿ ನಡೆಸಿ ಕಾಡಿನತ್ತ ಓಡಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ಕಳೆದ ಒಂದು ವಾರದಿಂದ ಬಡಗಲುಪುರ, ಹಾದನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಣಿಸಿಕೊಂಡು ಜನರ ಆತಂಕ್ಕೆ ಕಾರಣವಾಗಿ ಉಪಟಳ ನೀಡುತ್ತಿದ್ದ ಹುಲಿಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ ಬಳಿಕ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ ಶುಕ್ರವಾರ ಕಾಡಾನೆಗಳ ಸಹಾಯದಿಂದ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ಆನೆಗಳನ್ನು ಕಂಡು ಗಾಬರಿಯಿಂದ ಕಾಡಿನತ್ತ ಓಡುತ್ತಿದ್ದ ಹುಲಿ, ಜಮೀನಿನಲ್ಲಿ ಹತ್ತಿ ಬಿಡಿಸುತ್ತಿದ್ದ ರೈತ ಮಹದೇವಗೌಡ ಎಂಬವರ ಮೇಲೆ ದಾಳಿ ಮಾಡಿ ಆತನ ಮುಖ ಭಾಗಕ್ಕೆ ಗಂಭೀರ ಗಾಯ ಮಾಡಿತ್ತು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಜನರು ಹುಲಿಯನ್ನು ಸೆರೆ ಹಿಡಿಯಲೇಬೇಕು ಎಂದು ಪಟ್ಟುಹಿಡಿದಿದ್ದರು.
ನಂತರ ಶನಿವಾರ ಬೆಳಗ್ಗೆ ಮಹೇಂದ್ರ, ಅಭಿಮನ್ಯು, ಭೀಮ, ಭಗೀರಥ ಸಾಕಾನೆಗಳ ಸಹಾಯದಿಂದ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆಯು ಯಾಡಿಯಾಲ ಸಮೀಪದ ಜಮೀನುವೊಂದರಲ್ಲಿ ಹುಲಿ ಇರುವ ಬಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಕ್ಯಾಮೆರಾ ಟ್ರಾಪ್ ಗಳ ಮೂಲಕ ಖಚಿತ ಮಾಹಿತಿ ಪಡೆದು ಎರಡು ಡ್ರೋನ್ ಗಳ ನೆರವಿನಿಂದ ಹುಲಿ ಇರುವ ಸ್ಥಳ ಪತ್ತೆಹಚ್ಚಿ, ಬಳಿಕ ಪಶುವೈದ್ಯ ಡಾ.ವಸೀಂ ಮಿರ್ಜಾ, ಡಾ.ರಮೇಶ್, ಶಾರ್ಪ್ ಶೂಟರ್ ರಂಜನ್ ಸಾಕಾನೆಗಳ ಮೇಲೆ ಹೋಗಿ ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆಹಿಡಿಯುವಲ್ಲಿ ಯಶಸ್ವಿಯಾದರು.
ಕಳೆದ ಕೆಲ ದಿನಗಳಿಂದಲೂ ಹುಲಿ ಸೆರೆಗಾಗಿ ಅರಣ್ಯ ಇಲಾಖೆಯು ವಿವಿಧ ತಂಡಗಳನ್ನು ರಚಿಸಿಕೊಂಡು ಮೂರು ಕಡೆಗಳಲ್ಲಿ ಬೋನಿ ಇರಿಸಿ ಬಲೆ ಬೀಸಿತ್ತು. ಇಷ್ಟಿದ್ದರೂ ಸೆರೆಯಾಗದ ಹುಲಿ ಪತ್ತೆಗಾಗಿ ಕಾರ್ಯಾಚರಣೆ ಚುರುಕುಗೊಳಿಸಿದ ಅರಣ್ಯ ಇಲಾಖೆ, ಕ್ಯಾಮೆರಾ ಟ್ರಾಪ್ ಅಳವಡಿಸಿತ್ತು. ಶನಿವಾರ ಮಧ್ಯಾಹ್ನದ ವೇಳೆಗೆ ಹುಲಿ ಇರುವ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿ ಹುಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಸದ್ಯ ಇದು 3 ವರ್ಷ ಪ್ರಾಯದ ಹೆಣ್ಣು ಹುಲಿಯಾಗಿದ್ದು, ಗಾಯಗೊಂಡಿದೆ ಎನ್ನಲಾಗಿದೆ. ಸದ್ಯ ಈ ಹುಲಿ ಸೆರೆಗೆ ಬಂಡೀಪುರ ವ್ಯಾಪ್ತಿಯ ಬಡಗಲುಪುರ ಗ್ರಾಮದ ಅಕ್ಕಪಕ್ಕದ ವಲಯಗಳ ಸಿಬ್ಬಂದಿಗಳೂ ಸೇರಿ ಸುಮಾರು 65–70 ಮಂದಿ ಸಿಬ್ಬಂದಿ, ಡ್ರೋನ್ ಕ್ಯಾಮೆರಾ ತಂಡ ಹಾಗೂ ಪಶುವೈದ್ಯರು ಜತೆಗೆ ಸ್ಥಳೀಯ ಜನರ ಸಹಕಾರದಿಂದ ಸೆರೆ ಹಿಡಿಯಲಾಗಿದ್ದು, ಹುಲಿಯ ಆರೈಕೆಗಾಗಿ ಬನ್ನೇರುಘಟ್ಟ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಸಿಬ್ಬಂದಿಗಳ ತಂಡವನ್ನು ರಚಿಸಿ ನಿರಂತರವಾಗಿ ಕೂಂಬಿಂಗ್ ಕಾರ್ಯ ನಡೆಸಿದ್ದು 3 ಕಡೆ ಬೋನುಗಳನ್ನು ಇರಿಸಲಾಗಿರುತ್ತದೆ. ಇದರ ಫಲವಾಗಿ ಶನಿವಾರ ರಂದು ಬೆಳಿಗೆ, 08 ಗಂಟೆಯಲ್ಲಿ ಬಡಗಲಪುರ ರೈತರ ಜಮೀನಲ್ಲಿ ಬಳಿ ಅಳವಡಿಸಲಾಗಿದ್ದ ಬೋನಿನಲ್ಲಿ ಹುಲಿಯು ಸೆರೆಯಾಗಿದ್ದು, ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ನಿರ್ದೇಶಕರು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಂಡೀಪುರ ರವರ ಮಾರ್ಗದರ್ಶನದಲ್ಲಿ ಇಲಾಖಾ ಪಶುವೈದ್ಯಾಧಿಕಾರಿ ವಸಿಂ ಮಿರ್ಜಾ ರವರ ನೇತೃತ್ವದಲ್ಲಿ ಅರವಳಿಕೆ ಚುಚ್ಚು ಮದ್ದು ನೀಡುವ ಮೂಲಕ ಹುಲಿಯನ್ನು ಸುರಕ್ಷಿತವಾಗಿ ಹಿಡಿಯಲಾಗಿದ್ದು, ಹುಲಿಯು ಹೆಣ್ಣಾಗಿದ್ದು, ಅಂದಾಜು 3 ವಯಸ್ಸು ಆಗಿರಬಹುದೆಂದು ಅಂದಾಜಿಸಲಾಗಿರುತ್ತೆ ಎಂದು ನುಗು ಅರಣ್ಯ ಇಲಾಖೆ ಅಧಿಕಾರಿ ವಿವೇಕ್ ತಿಳಿಸಿದರು.
ಇದೇ ವೇಳೆ ಮಾತನಾಡಿದ ಬಡಗಲುಪುರ ಗ್ರಾಪಂ ಸದಸ್ಯ ಗಂಗಾಧರ್, ಕಳೆದ ಎರಡು ತಿಂಗಳಿನಿಂದ ಹುಲಿ ಉಪಟಳ ನೀಡುತ್ತಿತ್ತು. ಆಗಾಗ್ಗೆ ಜಾನುವಾರುಗಳನ್ನು ಕೊಂದು ನಾವು ಜಮೀನುಗಳಿಗೆ ಹೋಗಲಾರದಂತಹ ಸ್ಥಿತಿ ನಿರ್ಮಾಣವಾಗುವಂತೆ ಮಾಡಿತ್ತು. ಸದ್ಯ ಅರಣ್ಯ ಇಲಾಖೆ ತುಂಬ ಉತ್ಸುಕತೆಯಿಂದ ಹುಲಿ ಸೆರೆ ಹಿಡಿದಿದ್ದು, ಗ್ರಾಮಸ್ಥರಿಗೆ ಸಮಾಧಾನ ತರಿಸಿದೆ. ಇನ್ನು ಹುಲಿ ದಾಳಿಯಿಂದ ಗಾಯಗೊಳಗಾಗಿರುವ ರೈತ ಮಹದೇವಗೌಡ ಅವರಿಗೂ ಇಲಾಖೆ ಸೂಕ್ತ ಪರಿಹಾರ ನೀಡುವ ಮೂಲಕ ಅವರ ಜೀವನಕ್ಕೆ ಆಧಾರ ಕಲ್ಪಿಸಬೇಕು ಎಂದರು.
ಇದೇ ವೇಳೆ ಬಂಡೀಪುರ ಸಿಎಫ್ ಪ್ರಭಾಕರನ್, ಎಸಿಎಫ್ ಕೆ.ವಿ.ಸತೀಶ್, ಆರ್ ಎಫ್ ಒಗಳಾದ ವೈರಮುಡಿ, ರಾಜೇಶ್, ಅಮೃತೇಷ್, ರಾಮಾಂಜನೇಯ, ಅಮೃತಾ, ಮುನಿರಾಜು, ವಿವೇಕ್, ಶಾರ್ಪ್ ಶೂಟರ್ ರಂಜನ್, ಬಿ.ಎಸ್. ಗಂಗಾಧರ್, ಬಿ.ಆರ್.ನಟರಾಜು, ಬಿ.ಕೆ.ಶಿವರಾಜು, ಅಂಗಡಿ ಶಿವರಾಜು, ಲಿಂಗರಾಜು, ಪಿ.ರಾಜೀವ್, ರಾಮಚಂದ್ರ, ಕೂಸೇಗೌಡ, ರಮೇಶ್, ರಾಮಚಂದ್ರ ಹಾಜರಿದ್ದರು.
ಹುಲಿ ಸೆರೆಗೆ ಎರಡು ಬಾರಿ ಕಾರ್ಯಾಚರಣೆ ಮಾಡಿ ವಿಫಲವಾಗಿತ್ತು. ಈಗ ಎಲ್ಲರ ಸಹಕಾರದಿಂದ ಹುಲಿ ಸೆರೆಯಾಗಿದೆ. ಗ್ರಾಮಸ್ಥರೂ ಎಚ್ಚರಿಕೆಯಿಂದಿರಬೇಕು. ಒಬ್ಬೊಬ್ಬರೆ ಜಮೀನುಗಳಿಗೆ ಹೋಗಬಾರದು. ಜನರು ಆತಂಕ ಪಡುವುದು ಬೇಡ. ನಾವೂ ತರ್ತಾಗಿ ಕೆಲಸ ಮಾಡುತ್ತೇವೆ. ತಕ್ಷಣಕ್ಕೆ ಆನೆಗಳನ್ನೂ ಕರೆಸುವ ಪ್ರಯತ್ನ ಮಾಡುತ್ತೇವೆ. ಹುಲಿ ಸೆರೆ ಹಿಡಿಯಬೇಕಾದ ಅನಿವಾರ್ಯತೆ ಬಂದಾಗ ತಕ್ಷಣ ಕ್ರಮಕೈಗೊಳ್ಳುತ್ತೇವೆ.
— ಪ್ರಭಾಕರನ್, ಸಿಎಫ್, ಬಂಡೀಪುರ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC