ಸರಗೂರು: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ಮತದಾನದ ಹಕ್ಕಿನ ಮಹತ್ವ ಕುರಿತು ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಪಟ್ಟಣ ಪಂಚಾಯಿತಿ ವತಿಯಿಂದ ಮಹಾವೀರ ಸರ್ಕಲ್ ಬಳಿ ಸೋಮವಾರ ಬೀದಿನಾಟಕ ಮೂಲಕ ಮತದಾರರ ಜಾಗೃತಿ ಅಭಿಯಾನ ನಡೆಯಿತು.
ಚುನಾವಣಾ ಆಯೋಗದ ಸಂದೇಶ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಅಗತ್ಯ ಎಂಬ ಹಾಡಿನ ಜೊತೆಗೆ ನಾಟಕ ಮಾಡುವ ಮೂಲಕ ಮೈಸೂರು ಕಲಾವೇದಿಕೆಯ ತಂಡದವರು ಮತದಾರರಲ್ಲಿ ಅರಿವು ಮೂಡಿಸಿದರು.
ಮತದಾನ ಸಂವಿಧಾನಾತ್ಮಕ ಹಕ್ಕಾಗಿದ್ದು, ತಪ್ಪದೇ ಮತ ಚಲಾಯಿಸಿ ಪ್ರಜಾಪ್ರಭುತ್ವದ ಬಲವರ್ಧನೆಗೆ ಕಡ್ಡಾಯವಾಗಿ ಮತದಾನ ಮಾಡಿ, ನಿಮ್ಮ ಮತ ನಿಮ್ಮ ಹಕ್ಕು, ಜಾಗೃತ ಮತದಾರ- ಸದೃಢ ಪ್ರಜಾಪ್ರಭುತ್ವ, ಮತದಾನ ಮಾಡುವುದು ಪ್ರತಿ ಮತದಾರರ ಹಕ್ಕು ಮತ್ತು ಆದ್ಯ ಕರ್ತವ್ಯ, ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸಿ, ಚುನಾವಣೆ ಪ್ರಜಾಪ್ರಭುತ್ವದ ಭದ್ರ ಬುನಾದಿ, ಯಾವುದೇ ಆಸೆ ಆಮಿಷಗಳಿಗೆ ತುತ್ತಾಗದೆ ನಿರ್ಭೀತಿಯಿಂದ ಮತ ಚಲಾಯಿಸಿ, ಮತದಾರರ ಪಟ್ಟಿಯಲ್ಲಿ ಹೆಸರಿರುವುದನ್ನು ಖಚಿತ ಪಡಿಸಿಕೊಳ್ಳಿ ಎಂಬ ಸಂದೇಶ ನೀಡಲಾಯಿತು.
ಜನವರಿ 1 ಕ್ಕೆ 18 ವರ್ಷ ತುಂಬಿದವರೆಲ್ಲ ಮತದಾರರಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿ, ಚುನಾವಣಾ ಗುರುತಿನ ಚೀಟಿ ಇದ್ದರೂ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಮತದಾನಕ್ಕೆ ಅವಕಾಶವಿಲ್ಲ. ಇನ್ನೇಕೆ ತಡ ಇಂದೇ ಹೆಸರು ನೋಂದಣಿ ಮಾಡಿಸಿ..’ ಎಂಬ ಸಂದೇಶಗಳನ್ನು ಬೀದಿ ನಾಟಕ ಮೂಲಕ ಸಾರಲಾಯಿತು.
ಈ ಸಂದರ್ಭದಲ್ಲಿ ಪ.ಪಂ. ಮುಖ್ಯಾಧಿಕಾರಿ ಎಸ್ ಎಸ್ ಮಂಜುನಾಥ್, ಸಿಬ್ಬಂದಿ ವರ್ಗದವರು ಅರುಣ್, ಪಳಿನಿಸ್ವಾಮಿ, ಶಿವಪ್ರಸಾದ್, ಮೆಗಾ, ಚೈತ್ರ, ಇನ್ನೂ ಮುಖಂಡರು ಹಾಗೂ ಸಾರ್ವಜನಿಕರು ಸೇರಿದಂತೆ ಭಾಗಿಯಾಗಿದ್ದರು.
ವರದಿ: ಚಂದ್ರ ಹಾದನೂರು