ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಐಕ್ಯತಾ ಸಮಾವೇಶ” ದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಪಾಲ್ಗೊಂಡು, ಶೋಷಿತ ಸಮುದಾಯಗಳ ಜನರ ಸಮಾನತೆಯ ಕೂಗಿಗೆ ದನಿಗೂಡಿಸಿದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಐಕ್ಯತಾ ಸಮಾವೇಶವನ್ನು ಒಂದೇ ವೇದಿಕೆಯಲ್ಲಿ ಆಯೋಜಿಸಿರುವುದು ಪ್ರಶಂಸನೀಯ ಮತ್ತು ಸ್ವಾಗತಾರ್ಹವಾದುದ್ದು. ಅವಕಾಶ ಮತ್ತು ಸಾಮಾಜಿಕ ನ್ಯಾಯದಿಂದ ವಂಚಿತವಾದ ಶೋಷಿತ ಜನರು ಇಂದು ಒಗ್ಗೂಡಿ ಹೋರಾಟವನ್ನು ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕೋಟೆನಾಡು ಚಿತ್ರದುರ್ಗದಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಐಕ್ಯತಾ ಸಮಾವೇಶ” ದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸಮಾಜದ ಎಲ್ಲಾ ಜನರಿಗೂ ನ್ಯಾಯವನ್ನು ಕೊಡಬೇಕು ಎಂಬ ವಿಷಯದಲ್ಲಿ ಬದ್ಧತೆ ಹೊಂದಿರುವ ಪಕ್ಷ. ಬಿಜೆಪಿಯವರು ಸಾಮಾಜಿಕ ನ್ಯಾಯ, ಮೀಸಲಾತಿಯಲ್ಲಿ ನಂಬಿಕೆ ಮತ್ತು ಬದ್ಧತೆಯಿಲ್ಲದವರು.
ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನವನ್ನು ಮಾನಸಿಕವಾಗಿ ಒಪ್ಪದಿರುವವರು ಯಾರಾದರೂ ಇದ್ದರೆ ಅದು ಸಂಘಪರಿವಾದವರು. ಬಾಬಾ ಸಾಹೇಬರು ಎಲ್ಲರಿಗೂ ಸಮಾನತೆ, ಬ್ರಾತೃತ್ವ, ಸಮಾನ ಅವಕಾಶಗಳನ್ನು ನೀಡುವ ಸಮಸಮಾಜದ ಕನಸನ್ನು ಕಂಡು ಅದನ್ನು ಸಂವಿಧಾನದ ಮೂಲಕ ಈಡೇರಿಸುವ ಪ್ರಯತ್ನ ಮಾಡಿದ್ದಾರೆ ಎಂದರು.
ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ, ಬದ್ಧತೆ ಇಲ್ಲ. ಇದಕ್ಕೆ ಅವರ ನಡವಳಿಕೆಗಳು ಸಾಕ್ಷಿ. ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಸಚಿವರಾಗಿದ್ದ ಅನಂತ ಕುಮಾರ್ ಹೆಗ್ಡೆ ಅವರು ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಾವಣೆ ಮಾಡಲು ಎಂದು ಹೇಳಿದ್ದರು.
ಬಿಜೆಪಿಯ ಅಂದಿನ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರಾಗಲೀ, ಪ್ರಧಾನಿ ಮೋದಿ ಅವರಾಗಲೀ ಅನಂತಕುಮಾರ್ ಹೆಗ್ಡೆ ಅವರ ಮೇಲೆ ಯಾವ ಕ್ರಮ ಕೈಗೊಂಡಿಲ್ಲ. ಬಿಜೆಪಿ ಅವರು ದಲಿತರು, ಶೋಷಿತರು, ಬಡವರು, ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆ ಎಂದು ಅವರು ಹೇಳಿದರು.
ನಿಜವಾಗಿ ಬಿಜೆಪಿ ಸಾಮಾಜಿಕ ನ್ಯಾಯದ ಪರವಾಗಿ ಇದ್ದರೆ ಮೀಸಲಾತಿಯನ್ನು ಪ್ರಶ್ನೆ ಮಾಡುವುದು ಯಾಕೆ? ಇನ್ನು ಎಷ್ಟು ವರ್ಷ ಮೀಸಲಾತಿ ಬೇಕು ಎಂಬ ಬಗ್ಗೆ ತಗಾದೆ ತೆಗೆಯುತ್ತಾರೆ. ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಹೇಳಿರುವಂತೆ ಮೀಸಲಾತಿ ಭಿಕ್ಷೆಯಲ್ಲ, ಶೋಷಿತ ಜನರ ಹಕ್ಕು. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೆ ಅಲ್ಲಿಯವರೆಗೆ ಮೀಸಲಾತಿ ಇರಬೇಕು ಎಂದು ಅವರು ಹೇಳಿದ್ದಾರೆ.
ಮೇಲ್ಜಾತಿಯಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ 10% ಮೀಸಲಾತಿ ನೀಡಿದ್ದಾರೆ. ಸಂವಿಧಾನದಲ್ಲಿ ಇದಕ್ಕೆ ಅವಕಾಶ ಇಲ್ಲ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ನೀಡಬೇಕು ಎಂದು 14, 15 ಮತ್ತು 16ನೇ ಆರ್ಟಿಕಲ್ ಗಳು ಹೇಳಿವೆ. ಕೇಂದ್ರ ಸರ್ಕಾರ ಮೇಲ್ಜಾತಿಯ ಬಡವರಿಗೆ 10% ಮೀಸಲಾತಿಯನ್ನು ನೀಡಿ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಒಂದೇ ದಿನ ತರಾತುರಿಯಲ್ಲಿ ಬಿಲ್ ಪಾಸ್ ಮಾಡಿತು.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ಮೀಸಲಾತಿ ಹೆಚ್ಚಳ ಸಂಬಂದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಸಮಿತಿಯನ್ನು ರಚನೆ ಮಾಡಿದ್ದು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ಅವರು. ಈ ಸಮಿತಿ 2020ರ ಫೆಬ್ರವರಿ ತಿಂಗಳಿನಲ್ಲಿ ವರದಿಯನ್ನು ನೀಡಿತ್ತು. ಎರಡು ವರ್ಷ ಹತ್ತು ತಿಂಗಳು ವರದಿ ಇಟ್ಟುಕೊಂಡು ಬಿಜೆಪಿ ನಿದ್ದೆ ಮಾಡುತ್ತಿತ್ತು.
ವರದಿ ಜಾರಿಗೆ ಮತ್ತೆ ಹೋರಾಟ ಮಾಡಿದವರು ಕಾಂಗ್ರೆಸ್ ನ ಎಸ್,ಸಿ ಮತ್ತು ಎಸ್,ಟಿ ಜನಾಂಗಕ್ಕೆ ಸೇರಿದ ಶಾಸಕರುಗಳು. ಇದಕ್ಕೆ ಬಿಜೆಪಿಯಿಂದ ಆಯ್ಕೆಯಾಗಿರುವ ಒಬ್ಬನೇ ಒಬ್ಬ ಎಸ್,ಸಿ ಮತ್ತು ಎಸ್,ಟಿ ಸಮುದಾಯದ ಶಾಸಕ ಬೆಂಬಲ ನೀಡಲಿಲ್ಲ. ನಮ್ಮವರು ಹೋರಾಟ ಮಾಡಿದ ಕಾರಣ ಮತ್ತು ಚುನಾವಣೆ ಹತ್ತಿರ ಬಂದಿರುವುದರಿಂದ ಬಿಜೆಪಿ ಬೇರೆ ದಾರಿ ಇಲ್ಲದೆ ಎಸ್,ಸಿ ಮೀಸಲಾತಿಯನ್ನು 15 ರಿಂದ 17% ಮತ್ತು ಎಸ್,ಟಿ ಮೀಸಲಾತಿಯನ್ನು 3 ರಿಂದ 7% ಗೆ ಹೆಚ್ಚಳ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಇದು ಆಗಲು ನಾಗಮೋಹನ್ ದಾಸ್ ಅವರ ಸಮಿತಿಯ ಶಿಫಾರಸು ಕಾರಣ ಎಂದರು.
ರಾಜ್ಯ ಸರ್ಕಾರ ಸರ್ವಪಕ್ಷ ಸಭೆ ನಡೆಸಿ ಒಂದು ಸುಗ್ರೀವಾಜ್ಞೆಯನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿ ಎಸ್,ಸಿ ಮತ್ತು ಎಸ್,ಟಿ ಮೀಸಲಾತಿ ಹೆಚ್ಚಳ ಆಗಬೇಕಾದರೆ ಸಂವಿಧಾನದ ತಿದ್ದುಪಡಿ ಆಗಲೇಬೇಕು. ಈಗ ಮೀಸಲಾತಿ ಹೆಚ್ಚು ಮಾಡಿರುವುದರಿಂದ ಒಟ್ಟು ಮೀಸಲಾತಿ ಪ್ರಮಾಣ 50% ಮೀರುತ್ತದೆ, ಇದರಿಂದ ಸುಪ್ರೀಂ ಕೋರ್ಟ್ ನ ತೀರ್ಪಿನ ಉಲ್ಲಂಘನೆಯಾಗುತ್ತದೆ, ಇದಕ್ಕೆ ಸಂವಿಧಾನಾತ್ಮಕ ರಕ್ಷಣೆ ಸಿಗಬೇಕಾದರೆ ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸಬೇಕು.
ಇಂದಿನ ಸಭೆಯಲ್ಲಿ ನಮ್ಮ ಪಕ್ಷದ ನಾಯಕರಾದ ಪರಮೇಶ್ವರ ಅವರು 10 ಅಂಶಗಳ ನಿರ್ಣಯಗಳನ್ನು ನಿಮ್ಮೆಲ್ಲರ ಮುಂದಿಟ್ಟಿದ್ದಾರೆ. ಅದಕ್ಕೆ ತಾವು ಕೂಡ ಬೆಂಬಲ ಸೂಚಿಸಿದ್ದೀರಿ. ಈ ನಿರ್ಣಯಗಳ ಪ್ರಕಾರ ಜನವರಿ 31ರ ಒಳಗೆ ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ ಮಾಡಿ, 9ನೇ ಶೆಡ್ಯೂಲ್ ಗೆ ಸೇರಿಸುವ ಕೆಲಸ ಮಾಡಬೇಕು ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಬೀದಿಗಿಳಿದು ಪರಿಶಿಷ್ಟ ಜಾತಿ ಮತ್ತು ವರ್ಗದ ಜನರ ಪರವಾಗಿ ಹೋರಾಟ ಮಾಡಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್ ಪಕ್ಷ ಸದಾಕಾಲ ಸಂವಿಧಾನ ಮತ್ತು ಶೋಷಿತ ಜನರ ಪರವಾಗಿ ಇರಲಿದೆ. ಇಂಥಾ ಸಮಾವೇಶಗಳ ಸಂಖ್ಯೆ ಹೆಚ್ಚಾಗಲಿ, ಶೋಷಿತ ಜನರು ಸಂಘಟಿತರಾಗಲಿ ಎಂದು ಹಾರೈದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


