ಕೊರಟಗೆರೆ : ಹೊರರಾಜ್ಯದಿಂದ ತೋವಿನಕೆರೆಗೆ ಆಗಮಿಸಿ ಅನಧಿಕೃತವಾಗಿ ಪ್ರಾರಂಭ ಮಾಡಿರುವ ಸೆಲೂನ್ ಅಂಗಡಿಯನ್ನು ಮುಚ್ಚಿಸುವಂತೆ ಆಗ್ರಹಿಸಿ ಸವಿತಾ ಸಮಾಜದಿಂದ ತಮ್ಮ 12 ಅಂಗಡಿ ಮಳಿಗೆಗಳನ್ನು ಸ್ವಯಂ ಪ್ರೇರಿತವಾಗಿ ಕಳೆದ 3 ದಿನದಿಂದ ಮುಚ್ಚಿ ಮುಷ್ಕರಕ್ಕೆ ಕರೆ ನೀಡಿರುವ ಘಟನೆ ಇತ್ತೀಚಿಗೆ ಬೆಳಕಿಗೆ ಬಂದಿದೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ತೋವಿನಕೆರೆ ಗ್ರಾಮದಲ್ಲಿ ಹೊರ ರಾಜ್ಯದಿಂದ ಬಂದಿರುವ ಮುಸ್ಲಿಂ ಕುಟುಂಬವೊಂದು ಕ್ಷೌರದ ಅಂಗಡಿ ತೆರೆದಿದ್ದಾರೆ. ಇದರಿಂದ ಭಜಂತ್ರಿ ಸಮುದಾಯದ ಕುಟುಂಬಗಳಿಗೆ ಆರ್ಥಿಕವಾಗಿ ನಷ್ಟವಾಗಲಿದೆ ಎಂದು ಆರೋಪಿಸಿ, 3 ದಿನದಿಂದ ಸವಿತಾ ಸಮಾಜದ ಅಂಗಡಿ ಮಾಲೀಕರಿಂದ ಮುಷ್ಕರಕ್ಕೆ ಕರೆ ನೀಡಿ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಸವಿತಾ ಸಮಾಜದ ಆಗ್ರಹ ಏನು?
ಗ್ರಾಮ ಪಂಚಾಯಿತಿಯಿಂದ ಪರವಾನಗಿ ಪಡೆಯದೇ ಅನಧಿಕೃತವಾಗಿ ಮುಸ್ಲಿಂ ಕುಟುಂಬ ಸೆಲೂನ್ ತೆಗೆದಿದ್ದಾರೆರೇ. ಮುಸ್ಲಿಂ ಅಂಗಡಿ ಮಾಲೀಕ ಗ್ರಾಹಕರಿಂದ ಕಡಿಮೆ ಹಣ ಪಡೆದು ಕಟ್ಟಿಂಗ್ ಶೇವಿಂಗ್ ಮಾಡ್ತಾನೇ. ವಾರದಲ್ಲಿ 1 ದಿನವು ರಜೆಯಲ್ಲದೇ ಪ್ರತಿನಿತ್ಯ ಅಂಗಡಿ ತೆರೆಯುತ್ತಾರೆ. ನಾವು ಪೂರ್ವ ಕಾಲದಿಂದಲೂ ಇದೇ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಮಗೇ ಇವರಿಂದ ಪ್ರತಿನಿತ್ಯವು ನಷ್ಟವಾಗುತ್ತಿದೆ. ಆದ್ದರಿಂದ ಇವರ ಅಂಗಡಿ ಖಾಲಿ ಮಾಡಿಸಿ ನಮಗೇ ಅನುಕೂಲ ಕಲ್ಪಿಸಬೇಕು ಎಂಬುದು ಕೊರಟಗೆರೆ ಸವಿತಾ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.
ಅಂಗಡಿ ಮುಚ್ಚಿಸಿದ ಮುಖಂಡರು:
ತೋವಿನಕೆರೆಯ ಮುಸ್ಲಿಂ ಕುಟುಂಬದ ಅಂಗಡಿಯನ್ನು ಅನಧಿಕೃತವಾಗಿ ಮಾಡುತ್ತಿದ್ದಿರಾ ಎಂದು ಆರೋಪಿಸಿ ಸವಿತಾ ಸಮಾಜದ ಮುಖಂಡರು ಖುದ್ದಾಗಿ ತೆರಳಿ ನಾವು ನಮ್ಮ ಅಂಗಡಿಗಳನ್ನು ಮುಚ್ಚಿದ್ದೇವೆ. ನೀವು ನಿಮ್ಮ ಅಂಗಡಿ ಮಳಿಗೆಯನ್ನು ಮುಚ್ಚಿ. ಗ್ರಾಮ ಪಂಚಾಯಿತಿ ಪರವಾನಗಿ ಇಲ್ಲದೇ ಅಂಗಡಿ ಮಳಿಗೆ ತೆರೆಯಬಾರದು ಎಂದು ಮುಚ್ಚಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮುಸ್ಲಿಂ ಕುಟುಂಬದ ಅಳಲು:
ನಾವು ಕಳೆದ 15 ವರ್ಷದಿಂದ ಕೊರಟಗೆರೆ ಪಟ್ಟಣದಲ್ಲಿ ವಾಸವಿದ್ದೇವೆ. ನಮ್ಮದು ಸ್ವಂತ ಮನೆ ಮತ್ತು ಅಂಗಡಿಗಳಿವೆ. ಪಪಂ ಮತ್ತು ಗ್ರಾಮ ಪಂಚಾಯಿತಿಯಿಂದ ನಮಗೇ ಆಧಾರ್, ಐಡಿ ಮತ್ತು ರೇಷನ್ ಕಾರ್ಡ್ ನೀಡಿದ್ದಾರೇ. ನಮಗೇ ಗೊತ್ತಿರೋದು ಸೆಲೂನ್ ಕೆಲಸ ಬಿಟ್ಟರೇ ಬೇರೆನೂ ನಮಗೇ ಗೊತ್ತಿಲ್ಲ. ದುಡಿದು ತಿನ್ನುವ ಕೈಗಳಿಗೆ ಸುಮ್ಮನೇ ತೊಂದರೇ ನಮ್ಮ ಜೀವನ ನಡೆಯೋದು ಹೇಗೆ. ಗ್ರಾಮೀಣ ಭಾಗದ ಬಡ ಗ್ರಾಹಕರಿಂದ 10ರೂ ಕಡಿಮೆ ಪಡೆದುಕೊಂಡರೇ ತಪ್ಪೇನು ಹೇಳಿ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ತೋವಿನಕೆರೆ ಗ್ರಾಪಂ ಪಿಡಿಓ ಸ್ಪಷ್ಟನೆ:
ಕೊರಟಗೆರೆಯ ಸವಿತಾ ಸಮಾಜ ಸಂಘದಿಂದ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ. ಸವಿತಾ ಸಮಾಜದ ಮುಖಂಡರ ಮನವಿಯನ್ನು ಪರಿಶೀಲನೆ ನಡೆಸುತ್ತೇವೆ. ಅನಧಿಕೃತವಾಗಿ ಅಂಗಡಿ ಪ್ರಾರಂಭ ಮಾಡಿದ್ದರೆ ನೊಟೀಸ್ ಜಾರಿಮಾಡಿ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ. ಗ್ರಾಮ ಪಂಚಾಯಿತಿ ಅಂಗಡಿ ಪ್ರಾರಂಭಕ್ಕೆ ಪರವಾನಗಿ ಪಡೆಯೋದು ಕಡ್ಡಾಯ ಎಂದು ತೋವಿನಕೆರೆ ಪಿಡಿಓ ಲಕ್ಷ್ಮಿ ನಾರಾಯಣ್ ಸ್ಪಷ್ಟನೆ ನೀಡಿದರು.
ತೋವಿನಕೆರೆಯಲ್ಲಿ ಸವಿತಾ ಸಮಾಜದ 12 ಅಂಗಡಿಗಳಿವೆ. ಮುಸ್ಲಿಂ ಕುಟುಂಬ ಕಳೆದ 4 ವರ್ಷದ ಹಿಂದೆ ಒಂದೇ ಒಂದು ಸೆಲೂನ್ ಅಂಗಡಿ ತೆರೆದು ಜೀವನ ಸಾಗಿಸುತ್ತಿದ್ದಾರೆ. ಪ್ರತಿಯೊಬ್ಬರು ಕೆಲಸ ಮಾಡುವುದು ಹೊಟ್ಟೆ ಪಾಡಿಗಾಗಿಯೇ ಎಲ್ಲರೂ ಒಟ್ಟಾಗಿ ಇಂತಿಷ್ಟು ಹಣ ಎಂದು ನಿಗದಿ ಮಾಡಿ ನಾಮಫಲಕ ಅಳವಡಿಸಿ ಆದೇಶ ಮಾಡಿ ಎಲ್ಲರಿಗೂ ದುಡಿಮೆಗೆ ಅನುಕೂಲ ಕಲ್ಪಿಸಬೇಕಾದ ಜವಾಬ್ದಾರಿಯನ್ನು ಅಧಿಕಾರಿ ವರ್ಗ ತೆಗೆದು ಕೊಳ್ಳಬೇಕಿದೆ.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4