ತುಮಕೂರು: ತುಮಕೂರು ರನ್ನರ್ಸ್ ಕ್ಲಬ್ ಟ್ರಸ್ಟ್ ವತಿಯಿಂದ ‘ಸೇ ನೋ ಡ್ರಗ್ಸ್ – ಯಸ್ ಟೂ ಸ್ಪೋರ್ಟ್ಸ್’ ಎಂಬ ಘೋಷವಾಕ್ಯದೊಂದಿಗೆ 2026ನೇ ಫೆಬ್ರವರಿ 01 ರಂದು 5 ಕಿ.ಮೀ., 10 ಕಿ.ಮೀ ಹಾಗೂ 21 ಕಿ.ಮೀ.ಗಳ 2ನೇ ತುಮಕೂರು ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಡಾ.ರವಿ.ಪಿ.ಎಂ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ 2ನೇ ತುಮಕೂರು ಮ್ಯಾರಥಾನ್ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, 2026ರ ಫೆಬ್ರವರಿ 01 ರಂದು ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ 2ನೇ ತುಮಕೂರು ಮ್ಯಾರಥಾನ್ ಓಟ ಆಯೋಜಿಸಲಾಗಿದೆ. ಈಗಾಗಲೇ 1800 ಓಟಗಾರರು ತಮ್ಮ ಹೆಸರು ನೋಂದಾಯಿಸಿದ್ದು, ಜನವರಿ 18ಕ್ಕೆ ಹೆಸರು ನೋಂದಾವಣೆಯ ನೀಡಿದ್ದ ಅವಧಿ ಪೂರ್ಣಗೊಂಡಿದೆ. 5, 10 ಮತ್ತು 21 ಕಿಮಿ ಓಟದ ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆಯುವ ಓಟಗಾರರಿಗೆ ಐವತ್ತು ಸಾವಿರ ರೂಗಳ ಬಹುಮಾನವನ್ನು ಹಂಚಿಕೆ ಮಾಡಲಾಗುವುದು ಎಂದರು.
ಉದಯೋನ್ಮುಖ ಕ್ರೀಡಾಪಟುಗಳ ಪ್ರೋತ್ಸಾಹಕ್ಕೆ ತುಮಕೂರು ಮ್ಯಾರಥಾನ್ ಒಳ್ಳೆಯ ವೇದಿಕೆಯಾಗಿದೆ. ನಿಗದಿತ ಪ್ರವೇಶ ಶುಲ್ಕ ಪಾವತಿಸಿ ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ಗೆಲುವು ಸಾಧಿಸಿದ ಓಟಗಾರರಿಗೆ ನೀಡುವ ನಗದು ಬಹುಮಾನವನ್ನು ಮಾಜಿ ಸಂಸದರ ಕೆ. ಮಲ್ಲಣ್ಣ ಅವರ ಪುತ್ರರಾದ ಸತೀಶ್ ಕೆ. ಮಲ್ಲಣ್ಣ ಪ್ರಾಯೋಜಿಸಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ತುಮಕೂರು ರನ್ನರ್ ಕ್ಲಬ್ ಟ್ರಸ್ಟ್‌ನ ದರ್ಶನ್, ಸತೀಶ್ ಕೆ. ಮಲ್ಲಣ್ಣ, ಸುನೀತ, ರವೀಶ್, ಸಂಜೀತ್ ಮಲ್ಲಣ್ಣ, ಕೋರ್ ಕಮಿಟಿ ಸದಸ್ಯರಾದ ನಂದೀಶ್ ಮತ್ತಿತರರು ಉಪಸ್ಥಿತರಿದ್ದರು.
ಬೆಳಿಗ್ಗೆ 6ರಿಂದ ಎಂಜಿ ಸ್ಟೇಡಿಯಂ ನಿಂದ ಓಟ ಆರಂಭ:
ತುಮಕೂರು ರನ್ನರ್ಸ್ ಕ್ಲಬ್ ಟ್ರಸ್ಟ್‌ನ ಸುಹಾಸ್ ಮಾತನಾಡಿ, 2026ರ ಫೆ.01 ರಂದು ಬೆಳಿಗ್ಗೆ 6 ಗಂಟೆಗೆ 21 ಕಿ.ಮಿ. ಓಟ, 6:30 ಗಂಟೆಗೆ 10 ಕಿ.ಮಿ. ಓಟ ಮತ್ತು 7 ಗಂಟೆಗೆ 5 ಕಿ.ಮಿ. ತುಮಕೂರು ಮ್ಯಾರಥಾನ್ ಆರಂಭವಾಗಲಿದೆ. ತುಮಕೂರು ನಗರದ ಮಹಾತ್ಮಾ ಗಾಂಧಿ ಕ್ರೀಡಾಂಗಣದಿಂದ ಆರಂಭವಾಗುವ ತುಮಕೂರು ಮ್ಯಾರಥಾನ್ ಓಟ ಬೆಳಗುಂಬ ತಲುಪಿ, ಮಾರುತಿ ಇಂಟರ್ ನ್ಯಾಷನಲ್ ಶಾಲೆಯ ಬಳಿ ಎಡಕ್ಕೆ ತಿರುಗಿ, ವಡ್ಡರಹಳ್ಳಿ ಮೂಲಕ ಸ್ಪಾಂಡೇನಹಳ್ಳಿ, ಅಜ್ಜನಹಳ್ಳಿಗೆ ತಲುಪಿ, ಅದೇ ಮಾರ್ಗದಲ್ಲಿ ವಾಪಸ್ಸಾಗಿ, ಮಹಾತ್ಮಾ ಗಾಂಧಿ ಕ್ರೀಡಾಂಗಣದ ಬಳಿ ಮುಕ್ತಾಯವಾಗಲಿದೆ. ಓಟದಲ್ಲಿ ಭಾಗವಹಿಸಿ, ಓಟವನ್ನು ಸಂಪೂರ್ಣ ಗೊಳಿಸುವ ಎಲ್ಲರಿಗೂ ತುಮಕೂರಿನ ವಿಶೇಷತೆಗಳಾದ ತೆಂಗು, ಸಿದ್ದಗಂಗಾ ಮಠ, ಏಕಶಿಲಾ ಬೆಟ್ಟ ಇವುಗಳನ್ನು ಒಳಗೊಂಡ ಲೋಗೋ ಇರುವ ವಿಶೇಷ ಪದಕವನ್ನು ನೀಡಲಾಗುವುದು. ತುಮಕೂರಿನ ಕ್ರೀಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, 2ನೇ ತುಮಕೂರು ಮ್ಯಾರಥಾನ್ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


