ಹೆಚ್.ಡಿ.ಕೋಟೆ: ಕಳೆದ ಹಲವು ವರ್ಷಗಳಿಂದ ಪಟ್ಟಣ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ 7 ವರ್ಷದ ಗಂಡು ಚಿರತೆ ಸೆರೆಯಾಗಿದ್ದು, ಜನರಲ್ಲಿ ಆತಂಕ ಮತ್ತಷ್ಟು ಮನೆ ಮಾಡಿದೆ.
ಚಿರತೆ ಸೆರೆಗೆ ಹೌಸಿಂಗ್ ಬೋರ್ಡ್ ಕಾಲೋನಿ ಸಮೀಪದ ರೈತ ಗುಂಡು ಮಲ್ಲು ಅವರ ಜಮೀನಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇರಿಸಿದ್ದರು. ಆಹಾರ ಹರಸಿ ಬಂದ ಚಿರತೆ ಬೋನಿನಲ್ಲಿ ಬಂಧಿಯಾಗಿದೆ.
ಹಸು, ಮೇಕೆ, ಕುರಿಗಳನ್ನು ಬಲಿ ಪಡೆದಿದ್ದ ಚಿರತೆ ಈ ಭಾಗದ ರೈತರಲ್ಲಿ ಹೆಚ್ಚಿನ ಆತಂಕ ಮೂಡಿಸಿತ್ತು. ಕಳೆದ ವಾರವಷ್ಟೇ ಇದೇ ಸ್ಥಳದಲ್ಲಿ 5 ವರ್ಷದ ಗಂಡು ಚಿರತೆ ಬೋನಿಗೆ ಬಿದ್ದು ಬಂಧಿಯಾಗಿತ್ತು.
ಕಳೆದ ವಾರವಷ್ಟೇ ಇದೇ ಸ್ಥಳದಲ್ಲಿ ಬೋನಿಗೆ ಬಿದ್ದ 5 ವರ್ಷದ ಗಂಡು ಚಿರತೆಯನ್ನು ಆನೆಚೌಕೂರು ಅರಣ್ಯಕ್ಕೆ ಬಿಡಲಾಗಿತ್ತು. ವಾರ ಮಾಸುವ ಮುನ್ನವೇ ಅದೇ ಸ್ಥಳದಲ್ಲಿ 7 ವರ್ಷದ ಗಂಡು ಚಿರತೆ ಸೆರೆಯಾಗಿರುವುದು ರೈತರು ಹಾಗೂ ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಮನೆ ಮಾಡುವಂತೆ ಮಾಡಿದೆ.
ಈ ಭಾಗದಲ್ಲಿ ಮತ್ತಷ್ಟು ಕಾಡುಪ್ರಾಣಿಗಳು ಇರುವ ಶಂಕೆಯಿದೆ. ಅರಣ್ಯ ಇಲಾಖೆ ಬೀಟ್ ವ್ಯವಸ್ಥೆ ಹೆಚ್ಚಿಸಬೇಕು. ಬಲಿಯಾದ ಸಾಕು ಪ್ರಾಣಿಗಳ ವಾರಸುದಾರರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಹಾಗೂ ಸಾರ್ವಜನಿಕರು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದರು.
ಪಟ್ಟಣದ ಆಸುಪಾಸಿನ ಗ್ರಾಮಗಳಾದ ಹೊಸತೊರವಳ್ಳಿ, ಬೆಳಗನಹಳ್ಳಿ, ಶಾಂತಿಪುರ(ಹೆಬ್ಬಳ), ವಡ್ಡರಗುಡಿ ಸೇರಿದಂತೆ ಅನೇಕ ಗ್ರಾಮಗಳ ಜನರು ಚಿರತೆ ಹಾವಳಿಯಿಂದಾಗಿ ಜಮೀನಿನಲ್ಲಿ ಕೆಲಸಮಾಡಲು ಹಾಗೂ ಒಬ್ಬೊಬ್ಬರೆ ತಿರುಗಾಡಲು ಭಯಪಡುವಂತಾಗಿದೆ.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q