ಪಾವಗಡ: ನೋಂದವರ ಕಣ್ಣೀರು ಒರೆಸಿ, ಆತ್ಮಸ್ಥೆರ್ಯ ತುಂಬುತ್ತಿದ್ದ ಸೇವಾಲಾಲ ಮಹಾರಾಜರು ನಮ್ಮ ಬಂಜಾರ ಸಮುದಾಯಕ್ಕೆ ಮಾತ್ರ ಸೀಮಿತವಾಗದೆ, ಎಲ್ಲಾ ವರ್ಗಗಳಲ್ಲಿಯೂ ಸೇವೆ ಸಲ್ಲಿಸುವ ಮೂಲಕ ಮಾನವೀಯತೆಯ ನೈಜ ಸೇವಕರಾಗಿದ್ದರು ಎಂದು ಅಕ್ಷರ ದಾಸೋಹ ಎಡಿಎಂ ಶಂಕರಪ್ಪ ಅಭಿಪ್ರಾಯ ಪಟ್ಟರು.
ಶನಿವಾರ ತಾಲ್ಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಸಂತ ಶ್ರೀ ಸೇವಾಲಾಲ್ ರ 286ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಬಂಜಾರ ಸಮಾಜದ ಶ್ರೇಷ್ಠ ದಾರ್ಶನಿಕರಾದ ಸೇವಾಲಾಲ ಮಹಾರಾಜರು, ತಮ್ಮ ಆದರ್ಶ ಮತ್ತು ತತ್ವಗಳ ಮೂಲಕ ಸಮಾಜದ ಸಮಗ್ರ ಅಭಿವೃದ್ಧಿಗೆ ಶ್ರೇಷ್ಠ ಕೊಡುಗೆ ನೀಡಿದ ಮಹಾನ್ ಪುರುಷರು. ಅವರ ಜೀವನ ಸಂದೇಶ ಇಂದು ಸಹ ನಾವು ಕೈಗೊಳ್ಳಬೇಕಾದ ಮಾರ್ಗದರ್ಶನವಾಗಿದೆ ಎಂದು ತಿಳಿಸಿದರು.
ಗ್ರೇಡ್–2 ತಹಶೀಲ್ದಾರ್ ಚಂದ್ರಶೇಖರ್ ಮಾತನಾಡಿ, ಸಂತ ಸೇವಾಲಾಲ್ ಬಂಜಾರ ಸಮುದಾಯದ ಕುಲಗುರುವೂ ಹೌದು, ನಾಯಕರೂ ಹೌದು, ಸಾಮಾಜಿಕ ಪಿಡುಗುಗಳಾದ ವರದಕ್ಷಿಣೆ, ಬಾಲ್ಯ ವಿವಾಹ, ಮದ್ಯಪಾನ ಹಾಗೂ ಶಿಕ್ಷಣದ ಬಗ್ಗೆ ಬುಡಕಟ್ಟು ಜನಾಂಗದಲ್ಲಿ ಅಷ್ಟೇ ಅಲ್ಲದೇ ಇಡೀ ಸಮಾಜ ಸುಧಾರಣೆ ಧ್ವನಿ ಎತ್ತಿದವರು. ಹಾಗಾಗಿ ಅವರ ಮಾರ್ಗದರ್ಶನ ಅಳವಡಿಸಿಕೊಂಡು ಮುನ್ನಡೆದರೆ ಇಡೀ ಸಮಾಜ ಅಭಿವೃದ್ದಿಗೆ ಸಾಧ್ಯವೆಂದರು.
ಕಾರ್ಯಕ್ರಮದಲ್ಲಿ ಬಂಜಾರ ಸಮುದಾದ ಯುವ ಮುಖಂಡ ರಮೇಶ್ ಬಾಬು ಮಾತನಾಡಿ, ತಾಲ್ಲೂಕಿನಲ್ಲಿ ಬಂಜಾರ ಸಮುದಾಯ 30 ಸಾವಿರ ಜನ ಸಂಖ್ಯೆ ಇದ್ದು, ಸಮುದಾಯಕ್ಕೆ ಸಮುದಾಯ ಭವನಕ್ಕೆ ಸ್ಥಳ ಹಾಗೂ ಸೇವಾಲಾಲ್ ವೃತ್ತಕ್ಕೆ ಜಾಗಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಈಗಲಾದರೂ ಸ್ಥಳವನ್ನು ಸೂಚಿಸುವಂತೆ ಮನವಿ ಮಾಡಿಕೊಂಡರು. ಹಾಗೂ ಸೇವಾಲಾಲ್ ಜಯಂತಿ ಕಾರ್ಯಕ್ರಮಕ್ಕೆ ಯಾವ ತಾಲ್ಲೂಕು ಮಟ್ಟದ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಸಮುದಾಯದ ಮುಖಂಡರು ತಾಲ್ಲೂಕು ಆಡಳಿತ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಬಂಜಾರ ಸಮಾಜದ ಮುಖಂಡರಾದ ಪೀಕ ನಾಯ್ಕ, ಗೋವಿಂದ ನಾಯ್ಕ, ಶ್ರೀನಿವಾಸ ನಾಯ್ಕ, ಜಿ ಕುಮಾರ್ ನಾಯ್ಕ, ಜಗದೀಶ್ ನಾಯ್ಕ, ವರದಾ ನಾಯ್ಕ, ಶ್ರೀಕೃಷ್ಣ ನಾಯ್ಕ, ಮಂಜು, ಸತೀಶ್ ನಾಯ್ಕ, ವೆಂಕಟೇಶ್ ನಾಯ್ಕ, ಬಾಲು, ಚಂದ್ರಶೇಖರ್, ತಿರುಮಲೇಶ್, ಸೋಮಶೇಖರ್ ನಾಯ್ಕ ಹಾಗೂ ಎಡಿಎಲ್ ನಾಗಾಂಜನೇಯ, ಆಹಾರ ಶಿರಸ್ತೆದಾರ್ ಶಶಿಕಲಾ, ತಾಲ್ಲೂಕು ಆಡಳಿತ ಸಿಬ್ಬಂದಿಗಳು ಸೇರಿದಂತೆ ಇತರರು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4