ಬೆಂಗಳೂರು/ವಿಜಯಪುರ: ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿ, ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದ ಬೆಂಗಳೂರು ಮೂಲದ ಮಹಿಳೆ ಇದೀಗ ದಿಢೀರ್ ನಾಪತ್ತೆಯಾಗಿದ್ದಾರೆ. ಈ ಪ್ರಕರಣವು ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದೆ.
ಪಂಚಮಸಾಲಿ ಸಮುದಾಯದ 2A ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿರುವ ಜಯಮೃತ್ಯುಂಜಯ ಸ್ವಾಮೀಜಿ ಅವರು ತಮಗೆ ಲೈಂಗಿಕವಾಗಿ ಸಹಕರಿಸುವಂತೆ ಪೀಡಿಸುತ್ತಿದ್ದಾರೆ ಮತ್ತು ಪ್ರತಿದಿನ ರಾತ್ರಿ ಬೆತ್ತಲೆ ವಿಡಿಯೋ ಕಾಲ್ ಮಾಡುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು. ಅಲ್ಲದೆ, ಸ್ವಾಮೀಜಿ ತಮ್ಮ ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡು ಬೆದರಿಕೆ ಹಾಕುತ್ತಿದ್ದಾರೆ ಎಂದು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.
ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿರುವ ಜಯಮೃತ್ಯುಂಜಯ ಸ್ವಾಮೀಜಿ ಅವರು, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಹಿಳೆಯ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. “ಸದರಿ ಮಹಿಳೆಯು ತಾನು ಅನಾಥಾಶ್ರಮ ನಡೆಸುತ್ತಿರುವುದಾಗಿ ಹೇಳಿ ಪರಿಚಯ ಮಾಡಿಕೊಂಡಿದ್ದಳು. ಈಗ ನನ್ನ ತೇಜೋವಧೆ ಮಾಡುವ ಸಂಚು ರೂಪಿಸಿ, ಬ್ಲ್ಯಾಕ್‌ಮೇಲ್ ಮಾಡುವ ಮೂಲಕ 3 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ” ಎಂದು ಸ್ವಾಮೀಜಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸ್ವಾಮೀಜಿಯ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಸ್ವಾಮೀಜಿ ಪ್ರತಿದೂರು ನೀಡುತ್ತಿದ್ದಂತೆಯೇ ದೂರುದಾರ ಮಹಿಳೆ ನಾಪತ್ತೆಯಾಗಿದ್ದಾರೆ. ಪೊಲೀಸರು ಆಕೆಯ ವಿಚಾರಣೆಗಾಗಿ ಬೆಂಗಳೂರಿನ ನಿವಾಸಕ್ಕೆ ತೆರಳಿದಾಗ ಆಕೆ ಅಲ್ಲಿ ಇರಲಿಲ್ಲ. ಆಕೆಯ ಮೊಬೈಲ್ ಫೋನ್ ಕೂಡ ಸ್ವಿಚ್ಡ್ ಆಫ್ ಆಗಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ತಿಳಿದುಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


